image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾಗರಾಜ್ ಬಜಾಲ್ ಅವರ 120 ಕಿ.ಮೀ ಸ್ವಚ್ಛತೆಯ ದಂಡಯಾತ್ರೆ ಯಶಸ್ವಿ ಸಮಾರೋಪ: ನಾಗರಿಕರಿಂದ ಅದ್ಧೂರಿ ಸನ್ಮಾನ

ನಾಗರಾಜ್ ಬಜಾಲ್ ಅವರ 120 ಕಿ.ಮೀ ಸ್ವಚ್ಛತೆಯ ದಂಡಯಾತ್ರೆ ಯಶಸ್ವಿ ಸಮಾರೋಪ: ನಾಗರಿಕರಿಂದ ಅದ್ಧೂರಿ ಸನ್ಮಾನ

ಮಂಗಳೂರು:ಏಕಾಂಗಿಯಾಗಿ ಕಸ ಸಂಗ್ರಹಿಸುತ್ತಾ 120 ಕಿ.ಮೀ 'ಸ್ವಚ್ಛತೆಯ ದಂಡಯಾತ್ರೆ' ನಡೆಸಿ ಮಂಗಳೂರು ತಲುಪಿದ ಹಸಿರುದಳ ಯೋಜನೆಯ ವ್ಯವಸ್ಥಾಪಕ ನಾಗರಾಜ್ ಬಜಾಲ್ ಅವರಿಗೆ ನಾಗರಿಕರ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಅಳಪೆ ಪಡೀಲ್ ಬಯಲು ರಂಗಮಂದಿರದಲ್ಲಿ ಅದ್ಧೂರಿ ಸನ್ಮಾನದೊಂದಿಗೆ ಸಮಾರೋಪ ಸಮಾರಂಭ ನೆರವೇರಿತು.

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗವಾದ ಪಶ್ಚಿಮ ಘಟ್ಟದ ತಪ್ಪಲಿನ ಸಂಪಾಜೆಯಿಂದ ಅಕ್ಟೋಬರ್ 9ರಂದು ನಾಗರಾಜ್ ಅವರು ಕಸ ಸಂಗ್ರಹಿಸುವ ಜೊತೆಗೆ ಪಾದಯಾತ್ರೆಯನ್ನು ಆರಂಭಿಸಿದ್ದರು. ಈ ಅಭಿಯಾನವು ಸಂಪಾಜೆಯಿಂದ ಅರಂತೋಡು, ಸುಳ್ಯ, ಜಾಲ್ಸೂರು, ಕಾವು, ಪುತ್ತೂರು, ಮಾಣಿ, ಕಲ್ಲಡ್ಕ ಹಾಗೂ ಬಿ.ಸಿ.ರೋಡ್ ಮಾರ್ಗವಾಗಿ ಒಟ್ಟು 120 ಕಿಲೋಮೀಟರ್‌ಗಳಷ್ಟು ಸಾಗಿ ಮಂಗಳೂರು ತಲುಪಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗರಾಜ್ ಬಜಾಲ್, ಹಲವು ವರ್ಷಗಳಿಂದ ಸ್ವಚ್ಛತಾ ಅಭಿಯಾನಗಳು ನಡೆಯುತ್ತಿದ್ದರೂ ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿಯ ಕೊರತೆ ಎದ್ದುಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪಾದಯಾತ್ರೆಯ ಅವಧಿಯಲ್ಲಿ ಸುಮಾರು 20 ಟನ್‌ಗೂ ಅಧಿಕ ತ್ಯಾಜ್ಯವನ್ನು ಮಾರ್ಗದುದ್ದಕ್ಕೂ ಹೆಕ್ಕಿ, ಅದನ್ನು ವಿಂಗಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಈ ಕಾರ್ಯದ ವೇಳೆ ಕೆಲವರು ವ್ಯಂಗ್ಯವಾಡಿದರೂ, ಹಲವಾರು ಗ್ರಾಮ ಪಂಚಾಯತ್‌ಗಳು, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಯುವಜನತೆ ತಮಗೆ ನೀಡಿದ ಬೆಂಬಲವನ್ನು ಅವರು ಸ್ಮರಿಸಿಕೊಂಡರು.

ಸಾರ್ವಜನಿಕರು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸದೆ ರಸ್ತೆ ಬದಿಯಲ್ಲಿ ಚೆಲ್ಲುತ್ತಿರುವುದರಿಂದ ಗಂಭೀರ ಅಪಾಯಗಳು ತಲೆದೋರುತ್ತಿವೆ ಎಂದು ಅವರು ಎಚ್ಚರಿಸಿದರು. ಮಿಶ್ರಿತ ಕಸದಲ್ಲಿ ಒಡೆದ ಗಾಜುಗಳು, ಹಳೆಯ ಬ್ಲೇಡ್‌ಗಳು ಮತ್ತು ಆಸ್ಪತ್ರೆಯ ಅಪಾಯಕಾರಿ ಸಿರಿಂಜ್‌ಗಳು ಸೇರಿಕೊಳ್ಳುತ್ತಿವೆ. ಇತ್ತೀಚೆಗೆ ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವಾಗ ಮಹಿಳಾ ಪೌರಕಾರ್ಮಿಕರೊಬ್ಬರ ಕೈಗೆ ಸಿರಿಂಜ್ ಚುಚ್ಚಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಬೇಕಾದ ದುರ್ಘಟನೆ ಸಂಭವಿಸಿತ್ತು. ಅಲ್ಲದೆ ರಸ್ತೆ ಬದಿಗಳಲ್ಲಿ ಬಳಸಿ ಬಿಸಾಡಿದ ನೂರಾರು ಡೈಪರ್‌ಗಳು ಪರಿಸರ ಹಾಗೂ ಪೌರಕಾರ್ಮಿಕರ ಆರೋಗ್ಯಕ್ಕೆ ಮಾರಕವಾಗುತ್ತಿದ್ದು, ಈ ಬಗ್ಗೆ ತಕ್ಷಣದ ಕ್ರಮ ಮತ್ತು ಸಾರ್ವಜನಿಕ ಜಾಗೃತಿ ತುರ್ತಾಗಿ ಅಗತ್ಯವಿದೆ ಎಂದರು.

ಪರಿಸರ ಕಾಳಜಿಯ ಪಯಣದಲ್ಲಿ ನಾಗರಾಜ್ ಬಜಾಲ್ ಅವರು ಕಳೆದ ವರ್ಷ ಕಾರವಾರದಿಂದ ಮಂಗಳೂರಿನವರೆಗೆ ಸುಮಾರು 300 ಕಿಲೋಮೀಟರ್ ದೂರದ ಪಾದಯಾತ್ರೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್ ಹಾಗೂ ಫರಂಗಿಪೇಟೆ ವ್ಯಾಪ್ತಿಯಲ್ಲಿ ರಸ್ತೆ ಬದಿಗೆ ಕಸ ಎಸೆಯುವುದನ್ನು ತಡೆಯಲು "ಕಸ ಎಸೆಯಬೇಡಿ" ಎಂಬ ಜಾಗೃತಿ ಫಲಕ ಹಿಡಿದು ನಿಲ್ಲುವ ಮೂಲಕ ವಾಹನ ಸವಾರರ ಗಮನ ಸೆಳೆದಿದ್ದರು. ಅಲ್ಲದೆ ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಚೀಲಗಳನ್ನು ವಿತರಿಸುವ ಅಭಿಯಾನ ನಡೆಸಿದ್ದ ಅವರು, ಮುಂದಿನ ದಿನಗಳಲ್ಲಿ ಹತ್ತು ಗ್ರಾಮಗಳನ್ನು ದತ್ತಕ್ಕೆ ತೆಗೆದುಕೊಂಡು ಮಾದರಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪ ತೊಟ್ಟಿರುವುದಾಗಿ ತಿಳಿಸಿದರು.

ಈ ಸನ್ಮಾನ ಸಮಾರಂಭದಲ್ಲಿ ನಾಗರಾಜ್ ಬಜಾಲ್ ಅವರೊಂದಿಗೆ ಅವರ ಕುಟುಂಬದ ಸದಸ್ಯರನ್ನೂ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಂಗಳೂರು ನಗರ ದಕ್ಷಿಣ ವಲಯದ ಶಾಸಕ ಡಿ. ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಲಯನ್ಸ್ 317-ಡಿ ಜಿಲ್ಲೆಯ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಗೋವರ್ಧನ ಶೆಟ್ಟಿ, ಡಿ.ವೈ.ಎಫ್.ಐ. ರಾಜ್ಯ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಜನತಾ ವ್ಯಾಯಾಮ ಶಾಲೆಯ ಅಧ್ಯಕ್ಷ ದೀಪಕ್ ಬಜಾಲ್, ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಯಶರಾಜ್, ಸಂತ ಅಲೋಶಿಯಸ್ ಐಟಿಐ ಕಾಲೇಜಿನ ಪ್ರಾಂಶುಪಾಲ ರೋಷನ್ ಡಿಸೋಜಾ, ತರಬೇತಿ ಅಧಿಕಾರಿಗಳಾದ ವಿಲ್ಸನ್ ಮತ್ತು ನಾಯಲ್ ಲೋಬೊ, ಪಾವೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ವೆಲೇರಿಯನ್ ಡಿಸೋಜಾ, ಲಯನ್ ಅಲ್ಫೋನ್ಸ ಡಿ ಕುಟಿನ್ಹಾ, ಹಸಿರು ದಳ ಮಂಗಳೂರಿನ ವ್ಯವಸ್ಥಾಪಕ ಲಕ್ಷ್ಮೀಕಾಂತ್, ಎಸ್‌ಬಿಐ ಫೌಂಡೇಶನ್ ಹಾಗೂ ಹಸಿರು ದಳದ ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಹಸಿರು ದಳ ಸಂಸ್ಥೆಯ ಮೇಲ್ವಿಚಾರಕ ಸಾಂತಪ್ಪ ಸ್ವಾಗತಿಸಿ, ಪ್ರಜ್ವಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರಾವ್ಯ ಕಾರ್ಯಕ್ರಮವನ್ನು ನಿರೂಪಿಸಿ, ರಚಿತಪ್ರಿಯಾ ಎನ್. ವಂದಿಸಿದರು.

Category
ಕರಾವಳಿ ತರಂಗಿಣಿ