ಮಂಗಳೂರು: ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ಅಧಿಕೃತವಾಗಿ ಪುನರ್ ರಚನೆ ಮಾಡಲಾಗಿದ್ದು, ನೂತನ ಜಿಲ್ಲಾ ಅಧ್ಯಕ್ಷರಾಗಿ ಸೋಮಪ್ಪ ಅಲಂಗಾರು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ ಕೋ-ಆಪರೇಟಿವ್ ಬ್ಯಾಂಕ್ನ ಸಭಾಭವನದಲ್ಲಿ ಬಿಎಸ್ಪಿ ರಾಜ್ಯ ಸಂಯೋಜಕರಾದ ಗಂಗಾಧರ್ ಬಹುಜನ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಬಿಎಸ್ಪಿ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಎಂ. ಕೃಷ್ಣಮೂರ್ತಿ ಅವರ ಅನುಮೋದನೆಯೊಂದಿಗೆ ಹೊಸ ಪದಾಧಿಕಾರಿಗಳ ನೇಮಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ನೂತನ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ ಸೋಮಪ್ಪ ಅಲಂಗಾರ್, ಉಪಾಧ್ಯಕ್ಷರಾಗಿ ಶಿವಪ್ಪ ಗಾರ್ಡಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಿ. ಎಸ್. ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿಯಾಗಿ ನಾರಾಯಣ ಬೋಧ್ ಹಾಗೂ ಜಿಲ್ಲಾ ಖಜಾಂಚಿಯಾಗಿ ಶ್ರೀಮತಿ ಶಶಿಕಲಾ ಎಂ. ಅವರು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಗೋಪಾಲ ಮುತ್ತೂರು ಮತ್ತು ಶಿವರಾಮ್ ಕೆ. ಅವರನ್ನು ನೇಮಕ ಮಾಡಲಾಗಿದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.