ಮಂಗಳೂರು : ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಅವರು ಹಲವು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಜೀವಂತವಿರುವ ಫಲಾನುಭವಿಗಳನ್ನು ತಪ್ಪಾಗಿ ಮೃತರೆಂದು ದಾಖಲಿಸಿರುವ ಪ್ರಕರಣಗಳನ್ನು ಗುರುತಿಸಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಮತ್ತು ಮೃತ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದ್ದರೆ ಅದನ್ನು ವಸೂಲಿ ಮಾಡಲು ತಾಲೂಕು ಮಟ್ಟದಲ್ಲಿ ಸಿಡಿಪಿಒ, ಲೀಡ್ ಬ್ಯಾಂಕ್ ಅಧಿಕಾರಿಗಳು ಹಾಗೂ ಇಒಗಳ ಸಮನ್ವಯದೊಂದಿಗೆ ಶೇ.100 ರಷ್ಟು ಗುರಿ ಸಾಧಿಸುವಂತೆ ಅವರು ನಿರ್ದೇಶಿಸಿದರು.
ಇದರೊಂದಿಗೆ ಶಕ್ತಿ ಯೋಜನೆಯಡಿ ಕೆ.ಎಸ್.ಆರ್.ಟಿ.ಸಿ ಬಸ್ಗಳಲ್ಲಿ ವಿಶೇಷಚೇತನರಿಗೆ ಮೀಸಲಾದ ಆಸನಗಳು ಅವರಿಗೇ ಸಿಗುವಂತೆ ನೋಡಿಕೊಳ್ಳಲು ಮತ್ತು ಅನ್ನಭಾಗ್ಯ ಯೋಜನೆಯ ಇ-ಕೆವೈಸಿ ಪ್ರಕ್ರಿಯೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಮಳೆ-ಗಾಳಿಗೆ ವಿದ್ಯುತ್ ಸರಬರಾಜಿನಲ್ಲಿ ಆಗುವ ವ್ಯತ್ಯಯ ಸರಿಪಡಿಸಲು ಅಗತ್ಯವಿರುವ ಪವರ್ಮ್ಯಾನ್ಗಳ ನೇಮಕಾತಿಗೆ ಇಂಧನ ಸಚಿವರಿಗೆ ಪತ್ರ ಬರೆಯಲು ಹಾಗೂ ಸ್ಥಳೀಯ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ನರ್ವಾಡೆ ವಿನಾಯಕ್ ಕಾರ್ಭಾರಿ, ಪ್ರೊಬೆಷನರಿ ಐಎಎಸ್ ಅರ್ಚಿತ್ ಡೊಂಗ್ರೆ ಹಾಗೂ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.