image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಡ್ಲದ ಪಿಲಿಪರ್ಬ 5ನೇ ಆವೃತ್ತಿ: ಅಕ್ಟೋಬರ್ 18ರಂದು ಮಂಗಳೂರಿನಲ್ಲಿ ವೈಭವದ ಹುಲಿವೇಷ ಸ್ಪರ್ಧಾಕೂಟ

ಕುಡ್ಲದ ಪಿಲಿಪರ್ಬ 5ನೇ ಆವೃತ್ತಿ: ಅಕ್ಟೋಬರ್ 18ರಂದು ಮಂಗಳೂರಿನಲ್ಲಿ ವೈಭವದ ಹುಲಿವೇಷ ಸ್ಪರ್ಧಾಕೂಟ

ಮಂಗಳೂರು: ನಗರದ ಕೇಂದ್ರ ಮೈದಾನದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ 'ಕುಡ್ಲದ ಪಿಲಿಪರ್ಬ' 5ನೇ ಆವೃತ್ತಿಯ ಸ್ಪರ್ಧಾಕೂಟವು ಇದೇ ಅಕ್ಟೋಬರ್ 18ರಂದು ಬೆಳಿಗ್ಗೆ 9.30ಕ್ಕೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಡಿ. ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಭವ್ಯ ಹಾಗೂ ವಿಶಾಲವಾದ ವೇದಿಕೆಯಲ್ಲಿ ಸ್ಪರ್ಧಾಕೂಟ ಆರಂಭಗೊಳ್ಳಲಿದೆ. ಕರಾವಳಿ ಭಾಗದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಒಟ್ಟು 11 ಹುಲಿವೇಷ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಪ್ರತಿಯೊಂದು ತಂಡವು ಅತ್ಯಾಕರ್ಷಕ ಮೆರವಣಿಗೆಯ ಮೂಲಕ ವೇದಿಕೆಗೆ ಪ್ರವೇಶ ಪಡೆದು 20 ನಿಮಿಷಗಳ ಕಾಲ ತಮ್ಮ ಕಲಾ ಪ್ರದರ್ಶನವನ್ನು ನೀಡಲಿವೆ. ಈ ಬಾರಿ ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿಗಳು, ಮರಿಹುಲಿಗಳು, ಆಕರ್ಷಕ ಹಿಮ್ಮೇಳ ಹಾಗೂ ಧರಣಿ ಮಂಡಲದೊಂದಿಗೆ ಇಡೀ ಕೂಟವು ಅತ್ಯಂತ ವೈವಿಧ್ಯಮಯವಾಗಿ ಮೂಡಿಬರಲಿದೆ.

ಸ್ಪರ್ಧೆಯ ಪಾರದರ್ಶಕತೆಗಾಗಿ ಒಟ್ಟು 6 ಮಂದಿ ತೀರ್ಪುಗಾರರನ್ನು ನೇಮಿಸಲಾಗಿದ್ದು, ಇವರಲ್ಲಿ ನಾಲ್ವರು ವೇದಿಕೆಯಲ್ಲಿ ಹಾಗೂ ಇಬ್ಬರು 'ಥರ್ಡ್ ಅಂಪೈರ್' ರೂಪದಲ್ಲಿ ಒಳಗೆ ಕುಳಿತು ವಿಡಿಯೋ ವೀಕ್ಷಿಸಿ ನಿರ್ಣಯಿಸಲಿದ್ದಾರೆ. ಹುಲಿವೇಷ ತಂಡಗಳು ವೇದಿಕೆಗೆ ಬಂದು ಪ್ರದರ್ಶನ ನೀಡಿ ತೆರಳುವವರೆಗಿನ ಸಂಪೂರ್ಣ ಪ್ರಕ್ರಿಯೆಯು ವಿಡಿಯೋದಲ್ಲಿ ದಾಖಲಾಗಲಿದ್ದು, ಅಗತ್ಯವಿದ್ದರೆ ರೀಪ್ಲೇ ಪರಿಶೀಲಿಸಿ ಅಂತಿಮ ಫಲಿತಾಂಶ ಘೋಷಿಸಲಾಗುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳ ಜತೆಗೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಹುಲಿ, ಮುಡಿ, ಶಾಸೆ, ಬಣ್ಣಗಾರಿಕೆ ಮತ್ತು ಧರಣಿ ಮಂಡಲ ವಿಭಾಗಗಳಿಗೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುವುದು. ಅಲ್ಲದೆ, ಪಾಲ್ಗೊಳ್ಳುವ ಪ್ರತಿ ಹುಲಿವೇಷ ತಂಡಕ್ಕೂ ಗೌರವ ಧನ ನೀಡಲಾಗುತ್ತದೆ.

ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ನಾಡಿನ ಗಣ್ಯಾತಿಗಣ್ಯರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದು, ಪ್ರೇಕ್ಷಕರಿಗಾಗಿ ಮೈದಾನದಲ್ಲಿ 5 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಸುಸಜ್ಜಿತ ಗ್ಯಾಲರಿ ಹಾಗೂ ದೊಡ್ಡ ಪರದೆಯ ವ್ಯವಸ್ಥೆ ಮಾಡಲಾಗಿದೆ. ಮೈದಾನಕ್ಕೆ ಬಾರದವರು ಮನೆಯಲ್ಲೇ ಕುಳಿತು ವೀಕ್ಷಿಸಲು ನೇರಪ್ರಸಾರದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮೈದಾನದಲ್ಲಿ ಉತ್ತಮ ಪಾರ್ಕಿಂಗ್ ಮತ್ತು ಸ್ವಚ್ಛತೆಗೆ ವಿಶೇಷ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಕಾರ್ಯಕ್ರಮವು ನಿಗದಿತ ಸಮಯಕ್ಕೆ ಆರಂಭವಾಗಿ ರಾತ್ರಿ 10 ಗಂಟೆಯೊಳಗೆ ಮುಕ್ತಾಯಗೊಳ್ಳಲಿದೆ.

ಈ ಸ್ಪರ್ಧಾಕೂಟದಲ್ಲಿ ಪ್ರದರ್ಶನ ನೀಡಲಿರುವ ತಂಡಗಳ ಪಟ್ಟಿ :

ಹನುಮಾನ್ ಟೈಗರ್ಸ್ ಉಪ್ಪಳ, ಪಾಂಡೇಶ್ವರ ಶಾರದಾ ಹುಲಿ, ಶಿವಶಕ್ತಿ ಟೈಗರ್ಸ್ ಕುಂಜತ್ತೂರು ಮಂಜೇಶ್ವರ, ಕೊಡಿಯಾಲ್ ಬೈಲ್ ಫ್ರೆಂಡ್ಸ್ ಲೆಜೆಂಡ್ ಟೈಗರ್ಸ್, ಪೊಳಲಿ ದ ಕಿಂಗ್ ಟೈಗರ್ಸ್ ರಾಜ್ ಫ್ರೆಂಡ್ಸ್, ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ, ಟ್ಯಾಲೆಂಟ್ ಟೈಗರ್ಸ್ MYB ಕಚ್ಚೂರು ಮಾಲ್ತಿದೇವಿ ಅಪ್ಪೆನ ಮೋಕೆದ ಜೋಕುಲು, ಫ್ರೆಂಡ್ಸ್ ಅಂಗಾರಗುಡ್ಡೆ ಟೈಗರ್ಸ್ ಮುಲ್ಕಿ, ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್, ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ ಹಾಗೂ ಅಂತಿಮವಾಗಿ ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಭಾಗವಹಿಸಲಿವೆ.

ಪತ್ರಿಕಾಗೋಷ್ಠಿಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ ಹಾಗೂ ಪ್ರಮುಖರಾದ ನರೇಶ್ ಶೆಣೈ, ನವನೀತ್ ಶೆಟ್ಟಿ ಕದ್ರಿ, ಕಿರಣ್ ಶೆಣೈ, ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ ಮತ್ತು ಚೇತನ್ ಕಾಮತ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ