ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲಗುತ್ತು ನೇತೃತ್ವದಲ್ಲಿ ಕಲಾವಿದರಿಗೆ ನಿರ್ಮಾಣ ಮಾಡುತ್ತಿರುವ, ಪಟ್ಲ ಯಕ್ಷಾಶ್ರಯ 31ನೇ ಮನೆ ಸರಪಾಡಿಯಲ್ಲಿ ಹಸ್ತಾಂತರಗೊಂಡಿತು.
ಉದ್ಯಮಿ ಬಿ.ರಘುನಾಥ ಸೋಮಯಾಜಿ ಕೊಡುಗೆ ನೀಡಿದ ಈ ಮನೆಯನ್ನು ಸರಪಾಡಿ ಗ್ರಾಮದ ಮಠದಬೆಟ್ಟು ಎಂಬಲ್ಲಿ ಧರ್ಮಸ್ಥಳ ಮೇಳದ ಕಲಾವಿದ ಚಂದ್ರಶೇಖರ ಸರಪಾಡಿ ಅವರು ಕುಟುಂಬಕ್ಕೆ ಹಸ್ತಾಂತರಿಸಿ ಗೃಹಪ್ರವೇಶ ನೆರವೇರಿಸಲಾಯಿತು. ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಮಾತನಾಡಿ, ಒಂಬತ್ತು ವರ್ಷಗಳಲ್ಲಿ ಯಕ್ಷಗಾನ ಕಲಾವಿದರಿಗೆ ಸುಮಾರು 13 ಕೋಟಿ ವೆಚ್ಚದಲ್ಲಿ ವಿವಿಧ ರೀತಿಯಲ್ಲಿ ನೆರವು ನೀಡಲಾಗಿದ್ದು, ದಾನಿಗಳ ನೆರವಿನಿಂದ ಮುಂದಿನ ಒಂದೂವರೆ ವರ್ಷದಲ್ಲಿ 100 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ಬೆಂಗಳೂರಿನ ಉದ್ಯಮಿ ಆರ್. ಕೆ.ಭಟ್, ಬಂಟ್ವಾಳ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡ ಮಾತನಾಡಿದರು. ಕಲಾವಿದ ಚಂದ್ರಶೇಖರ ಸರಪಾಡಿ ದಂಪತಿ, ಪೋಷಕರಾದ ಗಂಗಯ್ಯ ನಾಯ್, ಪ್ರೇಮಾ, ಉಮೇಶ್ ಮಠದಬೆಟ್ಟು ಭಾಗವಹಿಸಿದ್ದರು.ಸರಪಾಡಿ ಘಟಕದ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಧನಂಜಯ ಶೆಟ್ಟಿ ನಾಡಬೆಟ್ಟು ಕಾರ್ಯಕ್ರಮ ನಿರೂಪಿಸಿದರು.