image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸಲು ಯುವಜನರು ಮುಂದಾಗಬೇಕು: ಡಾ. ಅಶೋಕ್ ದಳವಾಯಿ

ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸಲು ಯುವಜನರು ಮುಂದಾಗಬೇಕು: ಡಾ. ಅಶೋಕ್ ದಳವಾಯಿ

ಮೂಡಬಿದಿರೆ : ಮೂಡಬಿದಿರೆಯ ಮಿಜಾರಿನ ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ. (ಆನ್ರ್ಸ್) ಕೃಷಿ ಹಾಗೂ ಬಿ.ಟೆಕ್ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳ ಆಗಮನ ಕಾರ್ಯಕ್ರಮ ‘ದೀಕ್ಷಾರಂಭ 2026–27’ನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಬೆಳಗಿಸಿ, ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಅಶೋಕ್ ದಳವಾಯಿ, ಕೃಷಿಯನ್ನು ಲಾಭದಾಯಕ ಹಾಗೂ ನಾವೀನ್ಯ ಉದ್ಯಮವಾಗಿ ರೂಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಯುವಜನರು ಮುಂದಾಗಬೇಕು ಎಂದು ಕರೆ ನೀಡಿದರು. ಕೃಷಿ ಮತ್ತು ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆಗೆ ವಿಪುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಬಳಸಿ ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು. ವಿದ್ಯಾರ್ಥಿ ದೆಸೆಯಲ್ಲಿ ಚಂಚಲ ಮನಸ್ಸನ್ನು ನಿಯಂತ್ರಿಸಿ ಏಕಾಗ್ರತೆ, ಶಿಸ್ತು ಹಾಗೂ ಬದ್ಧತೆಯಿಂದ ಅಧ್ಯಯನ ಮಾಡಬೇಕು ಮತ್ತು ಸ್ಪಷ್ಟ ಗುರಿಗಳನ್ನು ರೂಢಿಸಿಕೊಂಡು ನಿರಂತರ ಪರಿಶ್ರಮ ಪಡಬೇಕು ಎಂದು ಅವರು ತಿಳಿಸಿದರು. ಕೃಷಿ ವಿಜ್ಞಾನಿಗಳಾದ ನಾರ್ಮನ್ ಬೋರ್ಲಾಗ್, ಡಾ. ಎಂ.ಎಸ್. ಸ್ವಾಮಿನಾಥನ್ ಹಾಗೂ ಡಾ. ವರ್ಗೀಸ್ ಕುರಿಯನ್ ಅವರ ಸಾಧನೆಗಳನ್ನು ಸ್ಮರಿಸಿದ ಅವರು, ವಿದ್ಯಾರ್ಥಿಗಳು ಅವರಿಂದ ಪ್ರೇರಣೆ ಪಡೆದು ಕೃಷಿ ಕ್ಷೇತ್ರದ ಆಧುನೀಕರಣ ಹಾಗೂ ಗ್ರಾಮೀಣ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಿರ್ವಹಣಾ ಟ್ರಸ್ಟಿ ವಿವೇಕ್ ಆಳ್ವ, ಸಂಸ್ಥೆಯಲ್ಲಿ ಲಭ್ಯವಿರುವ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಇതര ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಡಾ. ಮೋಹನ್ ಆಳ್ವ ಅವರ ಕನಸಿನಂತೆ ಮೂಡಬಿದಿರೆಯನ್ನು ಕೃಷಿ ಕಾಶಿಯನ್ನಾಗಿ ಮಾಡುವ ಮತ್ತು ಕೃಷಿಕರ ಬದುಕನ್ನು ಸುಧಾರಿಸುವ ಉದ್ದೇಶದಿಂದ ಕೃಷಿ ಮಹಾವಿದ್ಯಾಲಯವನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಕಾಲೇಜಿನ ಡೀನ್ ಡಾ. ಎಸ್.ಎನ್. ವಾಸುದೇನ್ ಸ್ವಾಗತಿಸಿದರು. ದ್ವಿತೀಯ ವರ್ಷದ ಕೃಷಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ರೈತಗೀತೆ ಪ್ರಸ್ತುತಪಡಿಸಿದರು. ಕೃಷಿ ವಿಸ್ತರಣಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪೂಜಾ ವಿ. ವಂದಿಸಿದರು ಹಾಗೂ ಕೃಷಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗುಣಭಾಗ್ಯ ಕಾರ್ಯಕ್ರಮ ನಿರೂಪಿಸಿದರು. ಕೃಷಿ ತಂತ್ರಜ್ಞಾನ ವಿಭಾಗದ ಡಾ. ಕೆ.ವಿ. ಸುರೇಶ್ ಉಪಸ್ಥಿತರಿದ್ದರು ಮತ್ತು ಡಾ. ಅಶೋಕ್ ದಳವಾಯಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಅಕ್ಟೋಬರ್ 31ರವರೆಗೆ ನಡೆಯಲಿರುವ ಈ ‘ದೀಕ್ಷಾರಂಭ’ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಆಹಾರ ವಿಜ್ಞಾನದ ವಿವಿಧ ವಿಷಯಗಳು ಮತ್ತು ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗಿದೆ.

Category
ಕರಾವಳಿ ತರಂಗಿಣಿ