image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್‌ನಲ್ಲಿ ಪ್ರಥಮ ಬ್ಯಾಚ್‌ ಎಂಎಸ್‌ಬಿಬಿಎಸ್‌ ವಿದ್ಯಾರ್ಥಿಗಳ ಶ್ವೇತವಸ್ತ್ರಧಾರಣಾ ಸಮಾರಂಭ

ಆಳ್ವಾಸ್‌ನಲ್ಲಿ ಪ್ರಥಮ ಬ್ಯಾಚ್‌ ಎಂಎಸ್‌ಬಿಬಿಎಸ್‌ ವಿದ್ಯಾರ್ಥಿಗಳ ಶ್ವೇತವಸ್ತ್ರಧಾರಣಾ ಸಮಾರಂಭ

ಮೂಡಬಿದಿರೆ : ಮೂಡಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್‌ನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ‘ಆಳ್ವಾಸ್ ಆರೋಹಣ 2026’ ಪ್ರಥಮ ಬ್ಯಾಚ್‌ನ ಎಂಎಸ್‌ಬಿಬಿಎಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ಶ್ವೇತವಸ್ತ್ರಧಾರಣಾ ಸಮಾರಂಭವು ಸೋಮವಾರ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ, ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲದೆ, ಮಾನವ ಜೀವವನ್ನು ಉಳಿಸುವ ಮಹತ್ತರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ರೋಗಿಗಳ ಬಗ್ಗೆ ಕರುಣೆ, ಸಹಾನುಭೂತಿ ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಂಡು, ಶಿಸ್ತು ಹಾಗೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಭಾರತೀಯ ವೈದ್ಯರು ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದು, ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ ಸೇರಿದಂತೆ ವಿದೇಶಗಳ ಆರೋಗ್ಯ ವ್ಯವಸ್ಥೆಯಲ್ಲಿ ಭಾರತೀಯ ವೈದ್ಯರ ಪಾತ್ರ ಶ್ಲಾಘನೀಯ ಎಂದರು. ವೈದ್ಯಕೀಯ ವಿದ್ಯಾರ್ಥಿಗಳು ಮೂಲ ವಿಷಯಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಿ, ಪ್ರಾವೀಣ್ಯತೆಯಿಂದ ಪ್ರಯೋಗಾಲಯದ ಅಭ್ಯಾಸಗಳನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಕರ್ನಾಟಕದಲ್ಲಿ ಒಟ್ಟು 72 ವೈದ್ಯಕೀಯ ಕಾಲೇಜುಗಳಿದ್ದು, ಹೊಸದಾಗಿ ಆರಂಭಗೊಂಡಿರುವ ಆಳ್ವಾಸ್ ವೈದ್ಯಕೀಯ ಕಾಲೇಜಿನ ಮೊದಲ ಶೈಕ್ಷಣಿಕ ವರ್ಷದಲ್ಲೇ 150 ಎಂಬಿಬಿಎಸ್ ಸೀಟುಗಳ ಪೈಕಿ 146 ಸೀಟುಗಳು ಭರ್ತಿಯಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು. ವೈದ್ಯಕೀಯ ಕ್ಷೇತ್ರವು ಅತ್ಯಂತ ಸೂಕ್ಷ್ಮವಾಗಿದ್ದು, ಪ್ರತಿಯೊಂದು ಕಾರ್ಯವನ್ನ ಎಚ್ಚರಿಕೆ, ಕಾಳಜಿ ಹಾಗೂ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಮಾರಂಭದಲ್ಲಿ ಪ್ರಥಮ ವರ್ಷದ ಎಲ್ಲಾ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಶ್ವೇತವಸ್ತ್ರಧಾರಣೆ (ವೈಟ್ ಕೋಟ್) ನೆರವೇರಿಸಲಾಯಿತು. ಕಾಲೇಜಿನ ಡೀನ್ ಡಾ. ಮಹಾಬಲ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ವೈದ್ಯಕೀಯ ಅಧೀಕ್ಷಕ ಡಾ. ಪಿ. ಹರೀಶ್ ನಾಯಕ್ ವಂದಿಸಿದರು ಮತ್ತು ಡಾ. ಕೃಷ್ಣ ಉಣ್ಣಿ ಹಾಗೂ ಡಾ. ಅಭಿಜ್ಞಾ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು. ತದನಂತರ ನಡೆದ ಅಧಿವೇಶನಗಳಲ್ಲಿ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಡಾ. ವಿನಯ್ ಆಳ್ವ ಅವರು ವಿದ್ಯಾರ್ಥಿ ಜೀವನದ ಮೌಲ್ಯಗಳು, ಶಿಸ್ತು ಮತ್ತು ವೃತ್ತಿಪರತೆಯ ಕುರಿತು ಉಪಯುಕ್ತ ಮಾರ್ಗದರ್ಶನ ನೀಡಿದರು.

Category
ಕರಾವಳಿ ತರಂಗಿಣಿ