ಮಂಗಳೂರು: ರಾಜ್ಯ ಸರ್ಕಾರದ ಕೆ.ಎ.ಎಸ್.ಎಸ್ (ಕರ್ನಾಟಕ ಆರೋಗ್ಯ ಸಂಜೀವಿನಿ) ಯೋಜನೆಯಡಿ ಸರಕಾರಿ ನೌಕರರಿಗೆ ನಗದುರಹಿತ ಚಿಕಿತ್ಸೆ ನೀಡಲು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಹಾಗೂ ಮಂಗಳೂರು ನಗರದ ಇನ್ನಷ್ಟು ಖಾಸಗಿ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ತರಬೇತಿ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಉಪನಿರ್ದೇಶಕ ಡಾ. ಮಹೇಶ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 14 ಆಸ್ಪತ್ರೆಗಳು ಈ ವ್ಯಾಪ್ತಿಗೆ ಬಂದಿದ್ದು, ನೌಕರರ ಗ್ರೂಪ್ ಆಧಾರದ ಮೇಲೆ ಚಿಕಿತ್ಸಾ ಪ್ಯಾಕೇಜ್ ನಿಗದಿಪಡಿಸಲಾಗಿದೆ ಎಂದರು. ನೌಕರರು ಕೆ.ಜಿ.ಐ.ಡಿ ಸಂಖ್ಯೆ ನೀಡಿ ಯಾವುದೇ ರೆಫರೆನ್ಸ್ ಇಲ್ಲದೆ ನೇರವಾಗಿ ನಿಗದಿತ ಆಸ್ಪತ್ರೆಗಳಿಗೆ ದಾಖಲಾಗಬಹುದು. ಆಸ್ಪತ್ರೆಗಳು ನೀಡುವ ಕ್ಲೇಮುಗಳನ್ನು 30 ದಿನಗಳ ಒಳಗಾಗಿ ಪಾವತಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೊಳಗಾದ ಗಾಯಾಳುಗಳಿಗೆ ಪ್ರಥಮ 7 ದಿನಗಳವರೆಗೆ ಉಚಿತ ಚಿಕಿತ್ಸೆ ನೀಡುವ 'ಪಿಎಂ ರಾಹತ್' ಯೋಜನೆಯ ಕುರಿತು ಖಾಸಗಿ ಆಸ್ಪತ್ರೆ ಪ್ರತಿನಿಧಿಗಳಿಗೆ ಜಾಗೃತಿ ಮೂಡಿಸಲಾಯಿತು. ಕೇಂದ್ರದಿಂದ 1.5 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿ 1 ಲಕ್ಷ ರೂ. ಸೇರಿದಂತೆ ಒಟ್ಟು 2.5 ಲಕ್ಷ ರೂ.ವರೆಗೆ ಉಚಿತ ತುರ್ತು ಚಿಕಿತ್ಸೆ ಲಭ್ಯವಾಗಲಿದೆ.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.