image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

SIR ಪ್ರಕ್ರಿಯೆ ಹಾಗೂ ಭಾರತ್ ಜೋಡೋ ಸಂಘಟನೆಗೆ ಆದ್ಯತೆ ನೀಡಿ: ಐವನ್ ಡಿʼಸೋಜಾ ಕರೆ

SIR ಪ್ರಕ್ರಿಯೆ ಹಾಗೂ ಭಾರತ್ ಜೋಡೋ ಸಂಘಟನೆಗೆ ಆದ್ಯತೆ ನೀಡಿ: ಐವನ್ ಡಿʼಸೋಜಾ ಕರೆ

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ (SIR) ಪ್ರಕ್ರಿಯೆ ಹಾಗೂ ಭಾರತ್ ಜೋಡೋ ಸಂಘಟನೆಯ ಸದಸ್ಯತ್ವ ನೋಂದಣಿ ಕುರಿತ ಪ್ರಗತಿ ಪರಿಶೀಲನಾ ಸಭೆಯು ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ಅವರ ನೇತೃತ್ವದಲ್ಲಿ ಜರುಗಿತು. ಸಭೆಯಲ್ಲಿ ಮಾತನಾಡಿದ ಐವನ್ ಡಿʼಸೋಜಾ ಅವರು, ಕರ್ನಾಟಕ ರಾಜ್ಯದ ಯುವಕರನ್ನು ಭಾರತ್ ಜೋಡೋ ಸಂಘಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ನೋಂದಾಯಿಸುವ ಕಾರ್ಯಕ್ಕೆ ಕಾರ್ಯಕರ್ತರು ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ನಗರ ಪ್ರದೇಶಗಳಲ್ಲಿ ಆಸಕ್ತಿಯಿಂದ ಕಾರ್ಯನಿರ್ವಹಿಸಿ ಯುವಕರಿಗೆ ಸಂಘಟನೆಯ ಪ್ರಯೋಜನಗಳನ್ನು ತಲುಪಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದು ತಿಳಿಸಿದರು.

ಎಸ್‌ಐಆರ್ ಪ್ರಕ್ರಿಯೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಫಾರಂ-7 ಸೇರಿದಂತೆ ಮತದಾರರ ಪಟ್ಟಿಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ಕಾರ್ಯಕರ್ತರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಪ್ರಜಾಪ್ರಭುತ್ವದ ಹಿತವನ್ನು ಕಾಪಾಡಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಜೆ.ಆರ್. ಲೋಬೋ ಅವರು, ಎಸ್‌ಐಆರ್ ಪ್ರಕ್ರಿಯೆ ಮತ್ತು ಭಾರತ್ ಜೋಡೋ ಸಂಘಟನೆಯ ಬಲವರ್ಧನೆ ಎರಡೂ ಮಹತ್ವದ ವಿಚಾರಗಳಾಗಿದ್ದು, ಕಾರ್ಯಕರ್ತರು ಹೆಚ್ಚಿನ ಮುತುವರ್ಜಿ ವಹಿಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಹಾಗೆಯೇ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಪೂಜಾರಿ ಅವರು ಮಾತನಾಡಿ, ಈ ಪ್ರಕ್ರಿಯೆಗಳ ಸಂದರ್ಭದಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸಲು ಕಾರ್ಯಕರ್ತರು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಈ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಮಾಜಿ ಶಾಸಕ ಜೆ.ಆರ್. ಲೋಬೋ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಬಿ. ಸಾಲ್ಯಾನ್ ಮತ್ತು ಜೆ. ಅಬ್ದುಲ್ ಸಲೀಂ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಎಸ್‌ಐಆರ್ ತರಬೇತುದಾರರಾದ ಅಮಿತಾ ಅಶ್ವಿನ್, ನಾಯಕರಾದ ಶುಭೋದಯ ಆಳ್ವ ಹಾಗೂ ಲಾರೆನ್ಸ್ ಸೇರಿದಂತೆ ಕೋ-ಆರ್ಡಿನೇಟರ್‌ಗಳು, ವಾರ್ಡ್ ಅಧ್ಯಕ್ಷರು ಹಾಗೂ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ