ಮಂಗಳೂರು : ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ವತಿಯಿಂದ ಅಕ್ಟೋಬರ್ ತಿಂಗಳ 9ನೇ ಮಾಸಿಕ ಸ್ವಚ್ಛತಾ ಶ್ರಮದಾನವನ್ನು ರೈಲ್ವೆ ನಿಲ್ದಾಣ ರಸ್ತೆ ಪ್ರದೇಶದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಎಂ.ಆರ್.ಪಿ.ಎಲ್ ಹಾಗೂ ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮಕ್ಕೆ ಎಂ.ಆರ್.ಪಿ.ಎಲ್ ಹಿರಿಯ ವ್ಯವಸ್ಥಾಪಕ ಎಂ.ಕೆ. ರಾವ್ ಮತ್ತು ಸಿಎಸ್‌ಆರ್ ವ್ಯವಸ್ಥಾಪಕ ಕೇಶವ ಪಾಟಾಳಿ ಜಂಟಿಯಾಗಿ ಚಾಲನೆ ನೀಡಿದರು. ಈ ಅಭಿಯಾನದಲ್ಲಿ ಕೆನರಾ ಪದವಿ ಕಾಲೇಜು ಹಾಗೂ ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಜೆನ್‌ಝೀ ವಿದ್ಯಾರ್ಥಿಗಳು ಮತ್ತು ಹಿರಿಯ ಸ್ವಯಂಸೇವಕರು ಸಕ್ರಿಯವಾಗಿ ಪಾಲ್ಗೊಂಡು ಶ್ರಮದಾನ ನಡೆಸಿದರು. ವಿಶ್ವವಿದ್ಯಾಲಯ ಕಾಲೇಜು ಗ್ರಂಥಾಲಯ ಸಮೀಪ ಬಹುಕಾಲದಿಂದ ಅಶುಚಿತ್ವದಿಂದ ಕೂಡಿದ್ದ 'ಬೈಕ್ ಸ್ಪಾಟ್' ಪ್ರದೇಶವನ್ನು ಸ್ವಚ್ಛಗೊಳಿಸಿ, ರಸ್ತೆ ಬದಿಯ ಗೋಡೆಗಳ ಮೇಲಿನ ಪೋಸ್ಟರ್, ಅಂಟುಹಾಳೆ ಹಾಗೂ ಅನಗತ್ಯ ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು. ಮುಂದಿನ ಹಂತದಲ್ಲಿ ಈ ಗೋಡೆಗಳಿಗೆ ಬಣ್ಣ ಬಳಿದು ವರ್ಲಿ ಕಲೆಗಳಿಂದ ಅಲಂಕರಿಸುವುದರೊಂದಿಗೆ, ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಹಸಿರು ಪ್ರದೇಶವನ್ನಾಗಿ ಪರಿವರ್ತಿಸುವ ಯೋಜನೆ ರೂಪಿಸಲಾಗಿದೆ.