image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಜಿರೆ SDM ಆಸ್ಪತ್ರೆಯಲ್ಲಿ ₹1.10 ಕೋಟಿ ಮೌಲ್ಯದ ಉಚಿತ ಡಯಾಲಿಸಿಸ್ ಸೇವೆ ನೀಡಿಕೆ

ಉಜಿರೆ SDM ಆಸ್ಪತ್ರೆಯಲ್ಲಿ ₹1.10 ಕೋಟಿ ಮೌಲ್ಯದ ಉಚಿತ ಡಯಾಲಿಸಿಸ್ ಸೇವೆ ನೀಡಿಕೆ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ.) ಆಸ್ಪತ್ರೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನ ಹಾಗೂ ನಿರ್ದೇಶನದಂತೆ ಪ್ರಸಕ್ತ ಸಾಲಿನ ಜನವರಿಯಿಂದ ಸೆಪ್ಟೆಂಬರ್‌ವರೆಗಿನ ಒಂಬತ್ತು ತಿಂಗಳ ಅವಧಿಯಲ್ಲಿ ಅಭೂತಪೂರ್ವ ಸೇವಾ ಕಾರ್ಯ ನೆರವೇರಿದೆ. ಈ ಅವಧಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳ ಹಿತದೃಷ್ಟಿಯಿಂದ ಒಟ್ಟು ₹1.10 ಕೋಟಿ (₹1 ಕೋಟಿ 10 ಲಕ್ಷ) ವೆಚ್ಚದಲ್ಲಿ 7,300 ಉಚಿತ ಡಯಾಲಿಸಿಸ್ ಚಿಕಿತ್ಸೆಗಳನ್ನು ಸಶಸ್ತ್ರ ಹಾಗೂ ಯಶಸ್ವಿಯಾಗಿ ಒದಗಿಸಲಾಗಿದೆ.

ಮೂತ್ರಪಿಂಡ (ಕಿಡ್ನಿ) ವೈಫಲ್ಯ ಮತ್ತು ತೀವ್ರ ಸ್ವರೂಪದ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ನಿಯಮಿತ ಡಯಾಲಿಸಿಸ್ ಅಗತ್ಯವಿರುತ್ತದೆ. ಪ್ರತಿ ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಬಡ ಕುಟುಂಬಗಳಿಗೆ ಭಾರಿ ಆರ್ಥಿಕ ಹೊರೆಯಾಗುತ್ತಿದ್ದು, ಹಲವರು ಚಿಕಿತ್ಸೆ ವೆಚ್ಚ ಭರಿಸಲಾಗದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ರೋಗಿಗಳ ಮತ್ತು ಅವರ ಕುಟುಂಬಗಳ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸುವ ಪವಿತ್ರ ಉದ್ದೇಶದಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಈ ಉಚಿತ ಸೇವಾ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.

ಈ ಮಹತ್ವದ ಸಾಧನೆಯ ಕುರಿತು ಮಾಹಿತಿ ನೀಡಿರುವ ಎಸ್.ಡಿ.ಎಂ. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿ.ಇ.ಒ.) ಜನಾರ್ದನ ಎಂ. ಅವರು, ಗ್ರಾಮೀಣ ಹಾಗೂ ಸುತ್ತಮುತ್ತಲಿನ ಭಾಗದ ರೋಗಿಗಳಿಗೆ ಉತ್ತಮ ಹಾಗೂ ಆಧುನಿಕ ಆರೋಗ್ಯ ಸೇವೆ ನೀಡುವುದು ಆಸ್ಪತ್ರೆಯ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದ್ದಾರೆ. ಉಚಿತ ಡಯಾಲಿಸಿಸ್ ಯೋಜನೆಯಿಂದಾಗಿ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಹಾಗೂ ನೆರೆಯ ತಾಲೂಕುಗಳ ನೂರಾರು ಮೂತ್ರಪಿಂಡ ರೋಗಿಗಳು ಹೊಸ ಜೀವನದ ಭರವಸೆ ಪಡೆದುಕೊಂಡಿದ್ದಾರೆ.

ಆಸ್ಪತ್ರೆಯ ನುರಿತ ವೈದ್ಯರು, ತಾಂತ್ರಿಕ ಸಿಬ್ಬಂದಿ ಹಾಗೂ ಶುಶ್ರೂಷಕರ ತತ್ಪರತೆಯಿಂದಾಗಿ ಈ ಬೃಹತ್ ಸೇವಾ ಕಾರ್ಯ ಯಶಸ್ವಿಯಾಗಿ ಸಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಮತ್ತು ರೋಗಿಗಳ ಕುಟುಂಬಸ್ಥರಲ್ಲಿ ವ್ಯಾಪಕ ಮೆಚ್ಚುಗೆ ಹಾಗೂ ಕೃತಜ್ಞತೆ ವ್ಯಕ್ತವಾಗಿದೆ.

Category
ಕರಾವಳಿ ತರಂಗಿಣಿ