image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು KSRTC ಯಿಂದ ದಸರಾ ವಿಶೇಷ ಪ್ರವಾಸ ಪ್ಯಾಕೇಜ್‌ಗೆ ಅದ್ಧೂರಿ ಚಾಲನೆ: ಮೊದಲ ದಿನವೇ 1,128 ಪ್ರಯಾಣಿಕರ ಪಯಣ

ಮಂಗಳೂರು KSRTC ಯಿಂದ ದಸರಾ ವಿಶೇಷ ಪ್ರವಾಸ ಪ್ಯಾಕೇಜ್‌ಗೆ ಅದ್ಧೂರಿ ಚಾಲನೆ: ಮೊದಲ ದಿನವೇ 1,128 ಪ್ರಯಾಣಿಕರ ಪಯಣ

ಮಂಗಳೂರು: 2026ರ ಸಾಲಿನ ದಸರಾ ನವರಾತ್ರಿ ಮಹೋತ್ಸವದ ಶುಭ ಸಂದರ್ಭದಲ್ಲಿ, ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗದ ವತಿಯಿಂದ ಸುತ್ತಮುತ್ತಲಿನ ಪ್ರಸಿದ್ಧ ದೇವಸ್ಥಾನಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಆಯೋಜಿಸಲಾಗಿರುವ "ದಸರಾ ವಿಶೇಷ ಪ್ಯಾಕೇಜ್ ಪ್ರವಾಸ"ಕ್ಕೆ ಭಾನುವಾರ ಬೆಳಿಗ್ಗೆ ಮಂಗಳೂರಿನ ಲಾಲ್ ಬಾಗ್ ಬಸ್ ನಿಲ್ದಾಣದ ಆವರಣದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಈ ಶುಭ ಸಮಾರಂಭದಲ್ಲಿ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌, ಕೆ ಎಸ್ ಆರ್ ಟಿ ಸಿಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿವರ್ಗ ಹಾಗೂ ಶ್ರೀ ವಿದ್ಯಾಗಣಪತಿ ಸೇವಾ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದು ಪ್ರವಾಸಕ್ಕೆ ಶುಭ ಕೋರಿದರು.

ದಸರಾ ಹಬ್ಬದ ಅವಧಿಯಲ್ಲಿ ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ಕ್ಷೇತ್ರಗಳ ದರ್ಶನ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ವಿಶೇಷ ಪ್ರವಾಸ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಾರ್ವಜನಿಕರಿಂದ ಈ ಪ್ರವಾಸ ಪ್ಯಾಕೇಜ್‌ಗೆ ಮೊದಲ ದಿನವೇ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಮಂಗಳೂರು ಮತ್ತು ಉಡುಪಿ ವಿಭಾಗಗಳಿಂದ ಒಟ್ಟು 25 ಬಸ್ಸುಗಳಲ್ಲಿ 1,128 ಪ್ರಯಾಣಿಕರು ವಿವಿಧ ತಾಣಗಳಿಗೆ ಪ್ರಯಾಣ ಬೆಳೆಸಿದರು.

ಮಂಗಳೂರಿನಿಂದ ತಲಕಾವೇರಿ - ಭಾಗಮಂಡಲಕ್ಕೆ 3 ಬಸ್‌ಗಳಲ್ಲಿ 147 ಪ್ರಯಾಣಿಕರು, ಕೊಲ್ಲೂರು ಕ್ಷೇತ್ರಕ್ಕೆ 6 ಬಸ್‌ಗಳಲ್ಲಿ 295 ಪ್ರಯಾಣಿಕರು, ಸಿಗಂದೂರಿಗೆ 5 ಬಸ್‌ಗಳಲ್ಲಿ 240 ಪ್ರಯಾಣಿಕರು, ಶೃಂಗೇರಿಗೆ 5 ಬಸ್‌ಗಳಲ್ಲಿ 245 ಪ್ರಯಾಣಿಕರು ಹಾಗೂ ಮಂಗಳೂರು ನವದುರ್ಗಾ ದರ್ಶನಕ್ಕೆ 3 ಬಸ್‌ಗಳಲ್ಲಿ 130 ಪ್ರಯಾಣಿಕರು ತೆರಳಿದರು. ಅದೇ ರೀತಿ ಉಡುಪಿಯಿಂದ ಶೃಂಗೇರಿ ಪ್ಯಾಕೇಜ್‌ಗೆ 1 ಬಸ್‌ನಲ್ಲಿ 43 ಪ್ರಯಾಣಿಕರು ಮತ್ತು ಕೊಲ್ಲೂರು ಪ್ಯಾಕೇಜ್‌ಗೆ 1 ಬಸ್‌ನಲ್ಲಿ 28 ಪ್ರಯಾಣಿಕರು ಪಯಣಿಸಿದರು.

ದಸರಾ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಭಕ್ತಾದಿಗಳು ಮತ್ತು ಪ್ರವಾಸಿಗರಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆಯಿದ್ದು, ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗವು ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

Category
ಕರಾವಳಿ ತರಂಗಿಣಿ