ಸುರತ್ಕಲ್: ದೇಶದ ಪ್ರತಿಷ್ಠಿತ ತಾಂತ್ರಿಕ ಮಹಾವಿದ್ಯಾಲಯವಾದ ಎನ್‌ಐಟಿಕೆ (NITK) ಎದುರಲ್ಲೇ ಇದ್ದ, ವಾಮಂಜೂರು ಡಂಪಿಂಗ್ ಯಾರ್ಡ್‌ನಂತಿದ್ದ ಬಸ್ ನಿಲ್ದಾಣವನ್ನು “ಮೀಡಿಯಾ ಮನಸುಗಳು” ತಂಡದ ಸದಸ್ಯರು ಸ್ವಚ್ಛಗೊಳಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಎನ್‌ಐಟಿಕೆ ಎದುರಿನ ಈ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ನೂರಾರು ಬಸ್ಸುಗಳು ಬಂದು ಹೋಗುತ್ತವೆ ಮತ್ತು ಸಾವಿರಾರು ಪ್ರಯಾಣಿಕರು ಕಾಯುತ್ತಾರೆ. ಆದರೆ, ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಬೀರ್ ಬಾಟಲಿಗಳು ಬಿದ್ದು, ಹುಲ್ಲು ಬೆಳೆದು ನಿಲ್ದಾಣವು ಅಕ್ಷರಶಃ ಕಸದ ಕೊಂಪೆಯಾಗಿತ್ತು. ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಂಸ್ಥೆಯ ಹೆಬ್ಬಾಗಿಲಿನಲ್ಲೇ ಈ ದುಸ್ಥಿತಿಯಿದ್ದರೂ ಮಂಗಳೂರು ಮಹಾನಗರ ಪಾಲಿಕೆ (MCC) ಸಂಪೂರ್ಣ ನಿರ್ಲಕ್ಷ್ಯ ವಹಿಸಿತ್ತು.
ವಿದ್ಯಾರ್ಥಿನಿಯೊಬ್ಬಳ ಮನವಿಗೆ ಸ್ಪಂದಿಸಿದ “ಮೀಡಿಯಾ ಮನಸುಗಳು” ತಂಡದ ಸದಸ್ಯರು, ಗುರುವಾರ ಮುಂಜಾನೆಯೇ ಕತ್ತಿ, ಹಾರೆ, ಹಿಡಿಸೂಡಿ ಹಿಡಿದು ಸ್ಥಳಕ್ಕಾಗಮಿಸಿ ನಿರಂತರ ಮೂರು ಗಂಟೆಗಳ ಕಾಲ ಶ್ರಮದಾನ ನಡೆಸಿ ನಿಲ್ದಾಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಕೇವಲ ವರದಿ ಮಾಡುವುದಕ್ಕಷ್ಟೇ ಸೀಮಿತಗೊಳ್ಳದೆ, ಪತ್ರಕರ್ತರು ನೇರ ಕಾರ್ಯಾಚರಣೆಗೆಳಿದು ಸ್ವಚ್ಛತೆಯ ಕ್ರಾಂತಿ ಮಾಡಿರುವುದು ಸ್ಥಳೀಯರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸ್ವಚ್ಛತಾ ಅಭಿಯಾನದಲ್ಲಿ ಮನಪಾ ನಿಕಟಪೂರ್ವ ಕಾರ್ಪೊರೇಟರ್ ಶ್ವೇತಾ ಪೂಜಾರಿ, ಸ್ವಚ್ಛತಾ ಮೇಲ್ವಿಚಾರಕ ಯೋಗೀಶ್, ಪೂಜಾ ಕೇಟರರ್ಸ್ ಮಾಲಕ ಜೈಕೃಷ್ಣ ಕೋಟ್ಯಾನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಮುಖರಾದ ಶಶಿ ಬೆಳ್ಳಾಯರು, ರಜನ್ ಕುಮಾರ್ ಕಾವೂರು, ಸಂದೇಶ್ ಶೆಟ್ಟಿ, ಅನೂಪ್ ಸೂರಿಂಜೆ ಮತ್ತು ಸಂತೋಷ್ ಹೊಸಬೆಟ್ಟು ಸಕ್ರಿಯವಾಗಿ ಭಾಗವಹಿಸಿದ್ದರು.