ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ 30.09.2026 ರಂದು ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಮರಣ ಹೊಂದಿದ ಭವಿಷ್ಯ ನಿಧಿ ಚಂದಾದಾರರಾದ ದಿವಂಗತ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಮಂಗಳೂರು ಪ್ರಾದೇಶಿಕ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ಸಕಾಲದಲ್ಲಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದೆ.
ಕುಟುಂಬಕ್ಕೆ ಪಾವತಿಸಬೇಕಾದ ಉದ್ಯೋಗಿಗಳ ಭವಿಷ್ಯ ನಿಧಿ ಹಾಗೂ ಉದ್ಯೋಗಿಗಳ ಠೇವಣಿ ಆಧಾರಿತ ವಿಮಾ ಸೌಲಭ್ಯಗಳ (EDLI) ಕ್ಷೇಮುಗಳನ್ನು ಇಪಿಎಫ್‌ಒ ತ್ವರಿತವಾಗಿ ಇತ್ಯರ್ಥಪಡಿಸಿದೆ. ಇದರೊಂದಿಗೆ ಉದ್ಯೋಗಿಗಳ ಪಿಂಚಣಿ ಯೋಜನೆ 2026ರ ಅಡಿಯಲ್ಲಿ ಮಾಸಿಕ ಪಿಂಚಣಿಯನ್ನೂ ಮಂಜೂರು ಮಾಡಲಾಗಿದ್ದು, ಈ ಎಲ್ಲಾ ಸೌಲಭ್ಯಗಳನ್ನು 08.10.2026 ರಂದೇ ಜಾರಿಗೊಳಿಸಿ ಮೊತ್ತವನ್ನು ಪಾವತಿಸಲಾಗಿದೆ.
ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಸಲ್ಲಿಸುವ ಉದ್ದೇಶದಿಂದ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಸಂದೀಪ್ ಬಿಸ್ವಾಸ್, ಸಹಾಯಕ ಆಯುಕ್ತ ಅಂಕಿತ್ ಸಿಂಗ್ ಹಾಗೂ ಪ್ರವರ್ತನಾಧಿಕಾರಿ ಅನಿತಾ ಆರ್ ಅವರು 09.10.2026 ರಂದು ದಿವಂಗತ ಮನೀಶ್ ಕರ್ಕಡ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಪಿಂಚಣಿ ಪಾವತಿ ಆದೇಶವನ್ನು (PPO) ಹಸ್ತಾಂತರಿಸಿದರು. ಈ ಭೇಟಿಯು ಸಂಕಷ್ಟದ ಸಮಯದಲ್ಲಿ ತನ್ನ ಸದಸ್ಯರ ಕುಟುಂಬಗಳೊಂದಿಗೆ ನಿಲ್ಲುವ ಇಪಿಎಫ್‌ಒ ಸಂಸ್ಥೆಯ ಮಾನವೀಯ ಕಾಳಜಿಯನ್ನು ಪ್ರತಿಬಿಂಬಿಸಿದೆ.
ಮೃತ ಸದಸ್ಯರ ಕುಟುಂಬಕ್ಕೆ ತನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುವ ಇಪಿಎಫ್‌ಒ ಸಂಸ್ಥೆಯು, ಅನಿರೀಕ್ಷಿತ ದುರಂತಗಳ ಸಮಯದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ನೆರವು ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದೆ.