image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳೆ, ಮಕ್ಕಳ ಪ್ರಕರಣ: ಇಲಾಖೆಗಳ ಸಮನ್ವಯಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಹಿಳೆ, ಮಕ್ಕಳ ಪ್ರಕರಣ: ಇಲಾಖೆಗಳ ಸಮನ್ವಯಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಮಹಿಳೆಯರು ಮತ್ತು ಮಕ್ಕಳು ಸಂತ್ರಸ್ತರಾಗಿರುವ ಪ್ರಕರಣಗಳಲ್ಲಿ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊಲೀಸ್ ಠಾಣೆಗಳಿಗೆ ಬರುವ ಇಂತಹ ಪ್ರಕರಣಗಳ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ತಕ್ಷಣವೇ ತಲುಪಿಸಬೇಕು ಎಂದು ನಿರ್ದೇಶಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಒಟ್ಟು 155 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 52 ಮಹಿಳೆಯರ ಮೇಲಿನ ದೌರ್ಜನ್ಯ, 10 ಅತ್ಯಾಚಾರ, 79 ಪೋಕ್ಸೋ, 1 ಬಾಲ್ಯವಿವಾಹ ಹಾಗೂ 11 ವರದಕ್ಷಿಣೆ ಕಿರುಕುಳ (10 ತನಿಖೆಯ ಹಂತದಲ್ಲಿದೆ) ಪ್ರಕರಣಗಳು ಸೇರಿವೆ. ಜೊತೆಗೆ 39 ಮಕ್ಕಳು ಮತ್ತು 86 ಮಹಿಳೆಯರ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಬಹುತೇಕರನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಮಹಿಳೆಯರ ಸಹಾಯವಾಣಿ 181ರ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ, ಕರೆ ಮಾಡುವ ಸಂತ್ರಸ್ತರಿಗೆ ತಕ್ಷಣವೇ ಅಗತ್ಯ ನೆರವು ದೊರಕಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಗರ್ಭಧಾರಣೆಗೆ ₹5,000 ನೆರವು ನೀಡುವ ಯೋಜನೆಯಲ್ಲಿ 4,438 ಫಲಾನುಭವಿಗಳನ್ನು ನೋಂದಾಯಿಸಿ ಗುರಿ ಮೀರಿದ ಸಾಧನೆ ಮಾಡಲಾಗಿದೆ ಹಾಗೂ ಎರಡನೇ ಬಾರಿ ಹೆಣ್ಣು ಮಗುವಾದಲ್ಲಿ ₹6,000 ನೀಡುವ ಯೋಜನೆಯಡಿ 1,406 ಫಲಾನುಭವಿಗಳು ದಾಖಲಾಗಿದ್ದಾರೆ ಎಂದು ತಿಳಿಸಿದರು.

ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜಿಲ್ಲೆಯಲ್ಲಿ ದಾಖಲಾದ 73 ಪ್ರಕರಣಗಳಲ್ಲಿ 30 ಇತ್ಯರ್ಥಗೊಂಡಿದ್ದು, 31 ಸಮಾಲೋಚನಾ ಹಂತದಲ್ಲಿವೆ. ಸಖಿ ಒನ್ ಸ್ಟಾಪ್ ಕೇಂದ್ರದ ಮೂಲಕ 24 ಮಂದಿಗೆ ಪೊಲೀಸ್ ನೆರವು, 59 ಮಂದಿಗೆ ವೈದ್ಯಕೀಯ ನೆರವು ಹಾಗೂ 11 ಮಂದಿಗೆ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ.

10ಕ್ಕಿಂತ ಹೆಚ್ಚಿನ ಸಿಬ್ಬಂದಿ ಇರುವ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ (ಐಸಿಸಿ) ರಚನೆ ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 1,823 ಸಮಿತಿಗಳು ರಚನೆಯಾಗಿವೆ. ಬಾಕಿ ಇರುವ ಕಾರ್ಖಾನೆ ಹಾಗೂ ಉದ್ಯಮಗಳಲ್ಲಿ ತಕ್ಷಣ ಸಮಿತಿ ರಚಿಸಲು ಕಾರ್ಮಿಕ ಇಲಾಖೆಗೆ ಸೂಚನೆ ನೀಡಲಾಯಿತು. ಇದೇ ವೇಳೆ ಪಡೀಲ್‌ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿಶುಪಾಲನಾ ಕೇಂದ್ರ ತೆರೆಯಲು ಅನುಮೋದನೆ ದೊರೆತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ