ಮಂಗಳೂರು: ನಗರದ ಸೈಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳ ಜಂಟಿ ಆಶ್ರಯದಲ್ಲಿ ಆಸಿಡ್ ದಾಳಿಯ ಸಂತ್ರಸ್ತರ ರಕ್ಷಣೆ ಮತ್ತು ಕಾನೂನು ನೆರವು ಕುರಿತು ಒಂದು ದಿನದ ಅರಿವು ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಾನು ಕೆ. ಎಸ್. ಅವರು, ಪ್ರಸ್ತುತ ಸಂದರ್ಭದಲ್ಲಿ ಆಸಿಡ್ ದಾಳಿಯ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡುವುದು ಹಾಗೂ ಕಾನೂನು ಅರಿವು ಮೂಡಿಸುವುದು ಅತ್ಯಂತ ಅಗತ್ಯ ಮತ್ತು ಮಹತ್ವದ ವಿಷಯವಾಗಿದೆ ಎಂದು ತಿಳಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿ ಸಂತ್ರಸ್ತರ ರಕ್ಷಣೆ ಮತ್ತು ಅವರಿಗೆ ಲಭ್ಯವಿರುವ ಕಾನೂನು ನೆರವುಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ್ ಎಂ.ಎಸ್., ಉಪ ಪೊಲೀಸ್ ಆಯುಕ್ತ ಕೆ. ರವಿಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಹಾಗೂ ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು ಟಿ ಮತ್ತಿತರರು ಭಾಗವಹಿಸಿದ್ದರು.