ಮೂಡುಬಿದಿರೆ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪೂರ್ವಭಾವಿಯಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಸ್ವಾಸ್ಥ್ಯ ತರಬೇತಿ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಉದ್ದೇಶದಿಂದ 'ಸಾಥಿ' (ಮಾನಸಿಕ ಆರೋಗ್ಯದ ಅರಿವು, ಪರಸ್ಪರ ವಿಶ್ವಾಸ, ಸಹಾಯ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಗೆ ವಿದ್ಯಾರ್ಥಿ ಸಹಚರರ ವೇದಿಕೆ) ಕಾರ್ಯಕ್ರಮಕ್ಕೆ ಶುಕ್ರವಾರ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಹಾಗೂ ಖ್ಯಾತ ಬರಹಗಾರ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ತಕ್ಷಣವೇ ವೃತ್ತಿಪರ ನೆರವು ದೊರಕುವುದು ಹಲವು ಸಂದರ್ಭಗಳಲ್ಲಿ ಸವಾಲಾಗಿರುವುದರಿಂದ, ಸಮುದಾಯದ ಮಟ್ಟದಲ್ಲಿ ಮಾನಸಿಕ ಆರೋಗ್ಯದ ಅರಿವು ಮೂಡಿಸುವ ಮತ್ತು ಪರಸ್ಪರ ಬೆಂಬಲ ನೀಡುವ ಮಾದರಿಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದರು. ಮಾನಸಿಕ ಆರೋಗ್ಯವನ್ನು ಕೇವಲ ವೈದ್ಯರು ಅಥವಾ ಆಪ್ತ ಸಮಾಲೋಚಕರ ಜವಾಬ್ದಾರಿಯಾಗಿ ಪರಿಗಣಿಸದೆ കുടുംബ, ಸ್ನೇಹಿತರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಪ್ರತಿಯೊಬ್ಬರೂ ಅದರ ಬಗ್ಗೆ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ 'ಸಾಥಿ'ಯಂತಹ ಸಹಪಾಠಿ ಬೆಂಬಲ ಕಾರ್ಯಕ್ರಮಗಳು ಮಾನಸಿಕ ಸಂಕಷ್ಟದ ಆರಂಭಿಕ ಲಕ್ಷಣಗಳನ್ನು ಗುರುತಿಸಲು, ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಮತ್ತು ಅಗತ್ಯವಿದ್ದಾಗ ಸೂಕ್ತ ವೃತ್ತಿಪರ ನೆರವು ಪಡೆಯಲು ಪ್ರೇರಣೆ ನೀಡಬಲ್ಲವು ಎಂದರು. ದೈಹಿಕ ಅನಾರೋಗ್ಯ ಉಂಟಾದಾಗ ವೈದ್ಯರನ್ನು ಸಂಪರ್ಕಿಸುವುದು ಸಹಜವೆಂದು ಪರಿಗಣಿಸುವಂತೆ, ಮಾನಸಿಕ ಒತ್ತಡ, ಆತಂಕ, ಖಿನ್ನತೆ ಅಥವಾ ಇತರ ಭಾವನಾತ್ಮಕ ಸಮಸ್ಯೆಗಳು ಎದುರಾದಾಗಲೂ ನೆರವು ಪಡೆಯುವುದನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮನಸ್ಸಿನ ಸಮಸ್ಯೆಗಳನ್ನು ಮುಚ್ಚಿಡುವುದು ಅಥವಾ ಅವುಗಳ ಬಗ್ಗೆ ಮಾತನಾಡಲು ಹಿಂಜರಿಯುವುದು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಬಹುದು; ಆದ್ದರಿಂದ ಮಾನಸಿಕ ಆರೋಗ್ಯದ ಕುರಿತು ಮುಕ್ತ ಸಂವಾದ ಮತ್ತು ಜಾಗೃತಿ ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಆಳ್ವಾಸ್ ಸ್ವಾಸ್ಥ್ಯ ತರಬೇತಿ ಕೇಂದ್ರದ ನಿರ್ದೇಶಕಿ ಡಾ. ದೀಪಾ ಕೊಠಾರಿ ಮಾತನಾಡಿ, 'ಸಾಥಿ' ಎಂದರೆ ಸಹಚರ ಅಥವಾ ಸಂಗಾತಿಯಾಗಿದ್ದು, ಮಾನಸಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ತಾವು ಒಂಟಿಯಲ್ಲ ಎಂಬ ಭರವಸೆ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರನ್ನು ಗುರುತಿಸಿ, ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿ, ಭಾವನಾತ್ಮಕ ಬೆಂಬಲ ನೀಡಿ, ಅಗತ್ಯವಿದ್ದಾಗ ಸೂಕ್ತ ತಜ್ಞರ ನೆರವಿನೊಂದಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿ 'ಸಾಥಿ' ಕಾರ್ಯನಿರ್ವಹಿಸಲಿದೆ. ಆದರೆ 'ಸಾಥಿ' ಕಾರ್ಯಕ್ರಮವು ವೃತ್ತಿಪರ ಆಪ್ತ ಸಮಾಲೋಚನೆಗೆ ಪರ್ಯಾಯವಲ್ಲ; ವಿದ್ಯಾರ್ಥಿಗಳು ಸಮಸ್ಯೆಗಳನ್ನು ಗುರುತಿಸಿ, ಸಹಾನುಭೂತಿಯಿಂದ ಆಲಿಸಿ, ಅಗತ್ಯವಿದ್ದಾಗ ತರಬೇತಿ ಪಡೆದ ತಜ್ಞರ ನೆರವು ಪಡೆಯಲು ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಹೇಳಿದರು.
ಆಳ್ವಾಸ್ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ವಿವೇಕ ಆಳ್ವ ಮಾತನಾಡಿ, ಪ್ರೀತಿ, ಕರುಣೆ ಮತ್ತು ಆತ್ಮೀಯತೆಯಿಂದ ಇತರರ ನೋವನ್ನು ಕಡಿಮೆ ಮಾಡಬಹುದು ಎಂದರು. ಮಾನಸಿಕ ಸ್ವಾಸ್ಥ್ಯಕ್ಕಾಗಿ ನಮ್ಮ ಆಲೋಚನೆ ಮತ್ತು ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಬೇಕು ಹಾಗೂ ನಮ್ಮಲ್ಲಿರುವ ಕೊರತೆಗಳನ್ನು ಅಡೆತಡೆಗಳೆಂದು ಭಾವಿಸದೆ, ಅವುಗಳನ್ನು ಸ್ವೀಕರಿಸಿ ಜೀವನದಲ್ಲಿ ಮುಂದೆ ಸಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿನಿ ಹಾಗೂ ಕರಾವಳಿನಾಡಿ ವಾರಪತ್ರಿಕೆಯ ಸಂಪಾದಕಿ ಅಶ್ವಿನಿ ಹೆಚ್. ನಂದಳಿಕೆ ಅವರ 'ಇಂತಿರು - ಇದು ಕಾಲದ ಹೆಜ್ಜೆ ಸದ್ದು' ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿನಿ ನಿಯಾತಿ ಕಾರ್ಯಕ್ರಮವನ್ನು ನಿರ್ವಹಿಸಿದರು.