ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ನಿಬಂಧನೆಗಳನ್ನು (ಟರ್ಮ್ ಶೀಟ್) ರೈತ ವಿರೋಧಿಯಾಗಿ ತಿದ್ದುಪಡಿ ಮಾಡಿ, ವಿಮಾ ಕಂಪನಿಗಳೊಂದಿಗೆ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಗಂಭೀರವಾಗಿ ಆರೋಪಿಸಿದ್ದಾರೆ. ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರೈತರ ಬೃಹತ್ ಹಕ್ಕೊತ್ತಾಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಸಿಗಬೇಕಾದ ಬೆಳೆ ವಿಮೆ ಪರಿಹಾರವನ್ನು ಗಣನೀಯವಾಗಿ ಕಡಿತಗೊಳಿಸಿ ಅನ್ಯಾಯ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತದ ಅವಧಿಯಲ್ಲಿ (2018-2023) ಜಿಲ್ಲೆಯ ರೈತರಿಗೆ ಹೆಕ್ಟೇರ್‌ಗೆ 80,000 ದಿಂದ 1.20 ಲಕ್ಷ ರೂಪಾಯಿವರೆಗೆ ವಿಮೆ ಪರಿಹಾರ ತಲುಪುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ನಂತರ 2023ರಲ್ಲಿ ಮಾಡಿಕೊಳ್ಳಲಾದ ಹೊಸ ಒಪ್ಪಂದದಲ್ಲಿ ರೈತರ ಹಿತಾಸಕ್ತಿಯನ್ನು ಬಲಿಕೊಡಲಾಗಿದೆ. ಹಿಂದೆ 125 ಮಿಲಿಮೀಟರ್‌ಗಿಂತ ಹೆಚ್ಚು ಮಳೆಯಾದರೆ ಸಿಗುತ್ತಿದ್ದ ಪರಿಹಾರದ ಮಿತಿಯನ್ನು ಏಕಾಏಕಿ 250 ಮಿಲಿಮೀಟರ್‌ಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ಈ ವರ್ಷ ಬಂಟ್ವಾಳ ತಾಲೂಕಿನ ಅಮ್ಮುಂಜೆ ಪಂಚಾಯತ್ ಸೇರಿದಂತೆ ಅನೇಕ ಭಾಗಗಳ ರೈತರಿಗೆ ಪರಿಹಾರ 'ಸೊನ್ನೆ' ಲಭಿಸಿದೆ. ನಿರಂತರ ಮಳೆ ಹಾಗೂ ಅತಿಯಾದ ಬಿಸಿಲಿನಿಂದಾಗುವ ನಷ್ಟವನ್ನು ಪರಿಹಾರದ ವ್ಯಾಪ್ತಿಯಿಂದಲೇ ಕೈಬಿಡಲಾಗಿದ್ದು, ವಿಮಾ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಟರ್ಮ್ ಶೀಟ್ ಬದಲಾಯಿಸಲಾಗಿದೆ ಎಂದು ವಿವರಿಸಿದರು.
ರಾಜ್ಯಾದ್ಯಂತ ವಿಮಾ ಕಂಪನಿಗಳಿಂದ ಸರ್ಕಾರ ಹಾಗೂ ಸಚಿವರು ಕೋಟ್ಯಂತರ ರೂಪಾಯಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ ಹರೀಶ್ ಪೂಂಜ, ಪ್ರತಿಯೊಂದು ಜಿಲ್ಲೆಯಿಂದ ಅಂದಾಜು 50 ಕೋಟಿ ರೂಪಾಯಿಗೂ ಹೆಚ್ಚು ಹಣ ದುರುಪಯೋಗವಾಗಿದ್ದು, ರಾಜ್ಯಮಟ್ಟದಲ್ಲಿ ಸುಮಾರು 1,500 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು. ಕೇಂದ್ರ ಸರ್ಕಾರ ತನ್ನ ಪಾಲು 10 ಪ್ರತಿಶತ ಪ್ರೀಮಿಯಂ ಹಣವನ್ನು ಸರಿಯಾದ ಸಮಯಕ್ಕೆ ಬಿಡುಗಡೆ ಮಾಡುತ್ತಿದ್ದರೂ, ರಾಜ್ಯ ಸರ್ಕಾರ ತನ್ನ 20 ಪ್ರತಿಶತ ಪಾಲನ್ನು ಕಂತುಗಳಲ್ಲಿ ಪಾವತಿಸಿ ರೈತರಿಗೆ ಮೋಸ ಮಾಡುತ್ತಿದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಹೊಸ ಟೆಂಡರ್ ಕರೆಯದೆ ಟಾಟಾ ಎಐಜಿ ಕಂಪನಿಯನ್ನೇ ಮುಂದುವರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಪ್ರಶ್ನಿಸಿದರು.
ಬೆಳೆ ವಿಮೆಯಷ್ಟೇ ಅಲ್ಲದೆ ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ಕಸ್ತೂರಿ ರಂಗನ್ ವರದಿ ಜಾರಿ, ಕಾಡುಪ್ರಾಣಿಗಳ ಉಪಟಳ ಹಾಗೂ ಸಾಲ ಸೌಲಭ್ಯಗಳ ವಿಚಾರದಲ್ಲೂ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಪೂಂಜ ಆರೋಪಿಸಿದರು. ಕೇರಳ ಸರ್ಕಾರವು ಎನ್‌ಜಿಟಿ ಮುಂದೆ ಸೂಕ್ತ ನಕ್ಷೆ ಹಾಗೂ ವಾದ ಮಂಡಿಸಿ ಕೃಷಿ ಭೂಮಿಯನ್ನು ಕಸ್ತೂರಿ ರಂಗನ್ ವ್ಯಾಪ್ತಿಯಿಂದ ಹೊರಗಿಡುವಲ್ಲಿ ಯಶಸ್ವಿಯಾಗಿದೆ. ಆದರೆ, ಕರ್ನಾಟಕ ಸರ್ಕಾರ ಕೇವಲ ಕಾಲಾವಕಾಶ ಕೋರಿ ಕೈಚೆಲ್ಲಿ ಕುಳಿತಿದೆ. ಮತ್ತೊಂದೆಡೆ, ರಾಜ್ಯದ ಇತರ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿರುವ 5 ಲಕ್ಷ ರೂಪಾಯಿವರೆಗಿನ ಶೂನ್ಯ ಬಡ್ಡಿದರದ ಕೃಷಿ ಸಾಲ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವಿಸ್ತರಿಸದೆ ತಾರತಮ್ಯ ಮಾಡಲಾಗಿದೆ. ಆನೆ, ಮಂಗ, ಕಾಡುಹಂದಿಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತರಿಗೆ ಕೋವಿ (ಬಂದೂಕು) ಪರವಾನಗಿ ನವೀಕರಣಕ್ಕೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ಸರ್ಕಾರ ತಕ್ಷಣವೇ 2018 ರಿಂದ 23ರ ವರೆಗಿದ್ದ ಹಳೆಯ ಟರ್ಮ್ ಶೀಟ್ ಅನ್ನು ಮರುಜಾರಿಗೊಳಿಸಬೇಕು. ಹೋಬಳಿವಾರು ಪಾರದರ್ಶಕ ಮಳೆ ಮಾಪನ ವ್ಯವಸ್ಥೆ ಕಲ್ಪಿಸಿ, ಪ್ರಸಕ್ತ ಸಾಲಿನ ವಿಮೆ ಪರಿಹಾರವನ್ನು ಮರುಪರಿಶೀಲಿಸಿ ಕೃಷಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ ಶಾಸಕರು, ಇಲ್ಲದಿದ್ದರೆ ಮುಂದಿನ ತಾಲೂಕು, ಜಿಲ್ಲಾ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಸಂಜೀವ ಮಠಂದೂರು, ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಪದ್ಮನಾಭ ಕೊಟ್ಟಾರಿ, ಸುಧಾಕರ್ ರೈ, ಕುಶಲಪ್ಪ ಗೌಡ, ವೆಂಕಟ್ ವಳಲಂಬೆ, ರಮೇಶ್ ಕಂಡೆಟ್ಟು ಮತ್ತು ಸಾವಿರಾರು ರೈತರು ಉಪಸ್ಥಿತರಿದ್ದರು.