image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಿಲಿಕುಳದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ: ರಸಪ್ರಶ್ನೆ ಸ್ಪರ್ಧೆ ಹಾಗೂ ವಿಜ್ಞಾನಿಗಳ ಸಂವಾದ

ಪಿಲಿಕುಳದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ: ರಸಪ್ರಶ್ನೆ ಸ್ಪರ್ಧೆ ಹಾಗೂ ವಿಜ್ಞಾನಿಗಳ ಸಂವಾದ

ಮಂಗಳೂರು: ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರ (ಇಸ್ರೋ) ಸಹಯೋಗದೊಂದಿಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸ್ಮರಣ ಶಕ್ತಿ, ರಸಪ್ರಶ್ನೆ ಹಾಗೂ ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎನ್‌ಐಟಿ ಕೆ ಸುರತ್ಕಲ್ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ. ಶ್ರೀನಿಕೇತನ್, ಇಸ್ರೋ ವಿಜ್ಞಾನಿಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸುವ ಮೂಲಕ ದೇಶದ ಬಾಹ್ಯಾಕಾಶ ಸಾಧನೆಗಳು ಹಾಗೂ ಭವಿಷ್ಯದ ಅನ್ವೇಷಣೆಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ ಎಂದರು. ಬಾಹ್ಯಾಕಾಶದ ಅನಂತ ಸಾಧ್ಯತೆಗಳನ್ನು ಅನ್ವೇಷಿಸುವುದು ಮುಂದಿನ ಪೀಳಿಗೆಯ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ ಹಾಗೂ ಸಂಶೋಧನಾ ಮನೋಭಾವ ಮೂಡುವುದು ಅತ್ಯಗತ್ಯ ಎಂದು ಅವರು ಹೇಳಿದರು.

ಯು.ಆರ್.ಎಸ್.ಸಿ ಅಧ್ಯಕ್ಷ ವೀರೇಂದ್ರ ಆರ್. ಕವಿ ಶೆಟ್ಟಿ ಮಾತನಾಡಿ, ಮೊಬೈಲ್, ಜಿಪಿಎಸ್ ಹಾಗೂ ಕಂಪ್ಯೂಟರ್‌ನಂತಹ ಆಧುನಿಕ ತಂತ್ರಜ್ಞಾನಗಳ ಕಾರ್ಯನಿರ್ವಹಣೆಯಲ್ಲಿ ಉಪಗ್ರಹ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತಿದೆ. ಭವಿಷ್ಯದಲ್ಲಿ ಅಂತರಿಕ್ಷ ನಿಲ್ದಾಣ ಹಾಗೂ ಸಂಶೋಧನಾ ಕೇಂದ್ರಗಳು ನಿರ್ಮಾಣವಾಗಲಿದ್ದು, ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಇಸ್ರೋ ಹಾಗೂ ಬಾಹ್ಯಾಕಾಶ ಕ್ಷೇತ್ರದ ಸೇವೆಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಎನ್. ಅಧ್ಯಕ್ಷತೆ ವಹಿಸಿ ಮಾತನಾಡಿ, ದಸರಾ ರಜೆಯಿದ್ದರೂ ಸಾವಿರಾರು ವಿದ್ಯಾರ್ಥಿಗಳು ಬಾಹ್ಯಾಕಾಶ ಜ್ಞಾನ ಪಡೆಯುವ ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ತಂದಿದೆ. ಪ್ರಕೃತಿ ವಿಕೋಪಗಳ ಮುನ್ಸೂಚನೆ ಹಾಗೂ ವಿಪತ್ತು ನಿರ್ವಹಣೆಯ ನಿಟ್ಟಿನಲ್ಲಿ ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇಸ್ರೋ ಉಪನಿರ್ದೇಶಕ ಡಾ. ಸಿ.ಎಸ್. ಮಧುಸೂದನ ಅವರು 'ರಾಕೆಟ್ ಕ್ರಾಂತಿ' ವಿಷಯದ ಕುರಿತು ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಡಿಪ್ಲೊಮಾ ಕಾಲೇಜುಗಳ ಸುಮಾರು 970 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದ ಈ ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಅಶೋಕ್ ಕೆ.ಆರ್. ಸ್ವಾಗತಿಸಿ, ಯು.ಆರ್.ಎಸ್.ಸಿ ತಾಂತ್ರಿಕ ಅಧಿಕಾರಿ ಶರತ್ ಕುಮಾರ್ ವಂದಿಸಿದರು. ವಂದನಾ ಪ್ರಮೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ