ಮಂಗಳೂರು : ಮಂಗಳೂರಿನ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಗಿಡಕ್ಕೆ ನೀರೆರೆಯುವ ಮೂಲಕ 'ಟಿಬಿ ಮುಕ್ತ ಭಾರತ' ನಿರ್ಮಿಸುವ 'ಜೋಶ್' (JOSH) ಕಾರ್ಯಕ್ರಮದ ಜಿಲ್ಲಾ ಮಟ್ಟದ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ದೇಶದೆಲ್ಲೆಡೆ ಕ್ಷಯರೋಗವನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುವ ಪರಿಕಲ್ಪನೆಯ ಈ ಯೋಜನೆಯನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ 'ಟಿಬಿ ಮುಕ್ತ ಭಾರತ' ಅಭಿಯಾನ ಯಶಸ್ವಿಯಾಗಲು ಜನಸಾಮಾನ್ಯರ ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿದೆ ಎಂದರು. ಪಂಚಾಯತ್ ಮಟ್ಟದಿಂದ ಹಿಡಿದು ಪ್ರತಿಯೊಬ್ಬರೂ ಒಂದಾಗಿ ಕೈಜೋಡಿಸುವ ಮೂಲಕ 'ಟಿಬಿ ಮುಕ್ತ ಪಂಚಾಯತ್'ಗಳನ್ನು ನಿರ್ಮಿಸಬೇಕು ಮತ್ತು ಕ್ಷಯರೋಗದ ಬಗ್ಗೆ ತಳಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.
ಈ 'ಜೋಶ್' (JOSH - Joint Squad for Health) ಯೋಜನೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯಗಳ ಜಂಟಿ ಸಹಯೋಗದೊಂದಿಗೆ ಜಾರಿಗೊಳಿಸಲಾಗುತ್ತಿದೆ. ಯುವಜನರ ನೇತೃತ್ವದಲ್ಲಿ ಜಾಗೃತಿ ಮೂಡಿಸುವ ಈ ಯೋಜನೆಯಲ್ಲಿ ಬ್ಲಾಕ್ ಮಟ್ಟದ ಕ್ಲಾಸ್-ಒನ್ ಅಧಿಕಾರಿಗಳು, 'ಮೈ ಭಾರತ್' (MY Bharat) ಸ್ವಯಂಸೇವಕರು ಮತ್ತು ಎನ್‌ಸಿಸಿ ಕೆಡೆಟ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ಟಿಬಿ ನಿರ್ಮೂಲನಾ ಅಧಿಕಾರಿ ಡಾ. ಖತೀಜಾ ಸೇರಿದಂತೆ ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.