ಸುರತ್ಕಲ್ : ಸುರತ್ಕಲ್ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕದಲ್ಲಿ (ಎನ್ಐಟಿಕೆ) 3 ಕೋಟಿ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹ ಜಲಾಶಯವನ್ನು 1 ಎಂಎಲ್ಡಿ (ಪ್ರತಿದಿನ 10 ಲಕ್ಷ ಲೀಟರ್) ನೀರು ಶುದ್ಧೀಕರಣ ಘಟಕಕ್ಕೆ ಸಂಪರ್ಕಿಸುವ "ಎನ್ಐಟಿಕೆರೆ" ಯೋಜನೆಯು ಯಶಸ್ವಿಯಾಗಿ ಕಾರ್ಯಾರಂಭಗೊಂಡಿದೆ. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎಂ.ಎಂ. ಮುರುಗಪ್ಪನ್ ಹಾಗೂ ನಿರ್ದೇಶಕರಾದ ಪ್ರೊ. ಬಿ. ರವಿ ಅವರು ಈ ನೂತನ ಸೌಲಭ್ಯವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ಬಿ.ಯು. ಚೆಂಗಪ್ಪ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀ ನಿರಂಜನ್ ಮಹಾಬಳಪ್ಪ ಸೇರಿದಂತೆ ಪ್ರಮುಖ ಗಣ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ಯಾಂಪಸ್ನ ಈಶಾನ್ಯ ಭಾಗದಲ್ಲಿರುವ ತಗ್ಗು ಪ್ರದೇಶವನ್ನು ಅಗೆದು ನಿರ್ಮಿಸಲಾದ ಈ ಜಲಾಶಯದ ಕಾಮಗಾರಿಗೆ 1974, 1983 ಮತ್ತು 1999ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಬೆಂಬಲ ನೀಡಿದೆ. ಜಲಾಶಯದಿಂದ ಶುದ್ಧೀಕರಣ ಘಟಕಕ್ಕೆ ನೀರನ್ನು ಸಾಗಿಸಲು 850 ಮೀಟರ್ ಉದ್ದದ ಭೂಗತ ಪೈಪ್ಲೈನ್ ಹಾಗೂ ತೇಲುವ ಪಂಪಿಂಗ್ ಕೇಂದ್ರವನ್ನು ಫಿನ್ನೋವೇಷನ್ ಟೆಕ್ ಸೊಲ್ಯೂಶನ್ಸ್ ಸಂಸ್ಥೆಯ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ಈ ತೇಲುವ ಪಂಪಿಂಗ್ ಕೇಂದ್ರವು ಫೈಬರ್ ಬಲವರ್ಧಿತ ಪ್ಲಾಸ್ಟಿಕ್ ತಟ್ಟೆಗಳ ಮೇಲೆ ಇರುವುದರಿಂದ ಜಲಾಶಯದ ತಳಭಾಗದಲ್ಲಿ ಬಳಕೆಯಾಗದೆ ಉಳಿಯುವ ನೀರಿನ ಪ್ರಮಾಣವು 1.5 ಮೀಟರ್ನಿಂದ ಅರ್ಧ ಮೀಟರ್ಗಿಂತ ಕಡಿಮೆಯಾಗಲಿದೆ. ಜತೆಗೆ, ತಲಾ 25,200 ಲೀಟರ್ ಸಾಮರ್ಥ್ಯದ ಎರಡು 15 ಎಚ್ಪಿ ಸಬ್ಮರ್ಸಿಬಲ್ ಪಂಪ್ಗಳನ್ನು ಇಲ್ಲಿ ಅಳವಡಿಸಲಾಗಿದೆ.
ಬೇಸಿಗೆಯಲ್ಲಿ ಎದುರಾಗುವ ನೀರಿನ ಕೊರತೆಯನ್ನು ನಿವಾರಿಸಲು ಮತ್ತು ಪ್ರಸಕ್ತ ವರ್ಷದ ಮಳೆ ಕೊರತೆಯಿಂದ ಎದುರಾಗಬಹುದಾದ ಬರದ ಝಳದಿಂದ ಕ್ಯಾಂಪಸ್ ಅನ್ನು ರಕ್ಷಿಸಲು ಈ ಯೋಜನೆ ಸಹಕಾರಿಯಾಗಲಿದೆ. ಯೋಜನೆಯನ್ನು ಶ್ಲಾಘಿಸಿದ ಅಧ್ಯಕ್ಷ ಶ್ರೀ ಎಂ.ಎಂ. ಮುರುಗಪ್ಪನ್ ಅವರು, ಹಳೆಯ ವಿದ್ಯಾರ್ಥಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ರೂಪಿತವಾದ ಈ ಎನ್ಐಟಿಕೆರೆ ಮಾದರಿಯು, ಮಳೆಗಾಲದಲ್ಲಿ ಉತ್ತಮ ಮಳೆ ಪಡೆದರೂ ಬೇಸಿಗೆಯಲ್ಲಿ ನೀರಿನ ಅಭಾವ ಎದುರಿಸುವ ಇತರ ಪ್ರದೇಶಗಳಿಗೆ ಅನುಕರಣೀಯವಾಗಿದೆ ಎಂದು ತಿಳಿಸಿದರು.