ಮೂಡುಬಿದಿರೆ: ಕೃತಕ ಬುದ್ಧಿಮತ್ತೆ (AI) ಒದಗಿಸುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ವಿವೇಚನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಹೇಳಿದರು.
ಆಳ್ವಾಸ್ ಕಾನೂನು ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ “ಜ್ಯೂರಿಸ್ ಒಡಿಸ್ಸಿ – ದ ಜರ್ನಿ ಇಂಟು ಲಾ” ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ಮೂಲಕ ದೊರೆಯುವ ಮಾಹಿತಿಯನ್ನು ವಿಮರ್ಶಿಸದೆ ಒಪ್ಪಿಕೊಳ್ಳಬಾರದು. ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ, ಅಧಿಕೃತ ಮೂಲಗಳೊಂದಿಗೆ ಹೋಲಿಕೆ ಮಾಡಿ, ಸರಿ-ತಪ್ಪುಗಳನ್ನು ವಿಶ್ಲೇಷಿಸುವ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಎಐ ಅನ್ನು ಜ್ಞಾನಾರ್ಜನೆಗೆ ಪೂರಕ ಸಾಧನವಾಗಿ ಬಳಸಬೇಕೇ ಹೊರತು ಸ್ವಂತ ಆಲೋಚನೆ ಮತ್ತು ವಿವೇಚನೆಗೆ ಪರ್ಯಾಯವಾಗಿ ಪರಿಗಣಿಸಬಾರದು. ತಂತ್ರಜ್ಞಾನ ವೇಗವಾಗಿ ಮಾಹಿತಿಯನ್ನು ನೀಡಬಲ್ಲದು, ಆದರೆ ಆಳವಾದ ಜ್ಞಾನ ಮತ್ತು ಚಿಂತನೆಯ ಸಾಮರ್ಥ್ಯವನ್ನು ಬೆಳೆಸುವಲ್ಲಿ ಪುಸ್ತಕಗಳ ಪಾತ್ರ ಸದಾ ಮಹತ್ವದ್ದಾಗಿದೆ ಎಂದರು.
ವೈದ್ಯಕೀಯ ಕ್ಷೇತ್ರದಂತೆ ಕಾನೂನು ಕೂಡ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡುವ ವಿಷಯವಾಗಿದೆ. ಬೋಧನೆ, ಕಾನೂನು ವೃತ್ತಿ, ಕಾನೂನು ಸಲಹೆ ಹಾಗೂ ಸಾರ್ವಜನಿಕ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವಕಾಶಗಳಿವೆ. ಕಾನೂನುಗಳು ಮತ್ತು ಕಾಯ್ದೆಗಳನ್ನು ಹೇಗೆ ಅರ್ಥೈಸಲಾಗುತ್ತದೆ, ಅವುಗಳ ವ್ಯಾಖ್ಯಾನ ಹೇಗೆ ನಡೆಯುತ್ತದೆ ಹಾಗೂ ಅವು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರತೆ, ಶಿಸ್ತು ಮತ್ತು ದೃಢಸಂಕಲ್ಪದಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ಉದ್ದೇಶ ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ವೃತ್ತಿಪರ ಕೌಶಲ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದಾಗಿದೆ. ಕಾನೂನು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ವೃತ್ತಿಜೀವನಕ್ಕೆ ಅಗತ್ಯವಾದ ಪ್ರಾಯೋಗಿಕ ಅನುಭವವನ್ನು ಪಡೆಯಲು ಇಂಟರ್ನ್‌ಶಿಪ್, ಮೂಟ್ ಕೋರ್ಟ್‌ಗಳಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕಾನೂನು ವೃತ್ತಿಯಲ್ಲಿ ವೃತ್ತಿಪರ ನಡವಳಿಕೆ, ಶಿಸ್ತು, ಔಪಚಾರಿಕತೆ, ಉತ್ತಮ ಸಂವಹನ ಕೌಶಲ ಮತ್ತು ನೈತಿಕ ಮೌಲ್ಯಗಳು ಅತ್ಯಂತ ಮಹತ್ವದ್ದಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂ ಕಾನೂನು ಕಾಲೇಜಿನ ಡಾ. ಶಾರಿಕಾ ರೈ ಹಾಗೂ ವಿವೇಕಾನಂದ ಕಾನೂನು ಕಾಲೇಜಿನ ಡಾ. ಬಿ.ಕೆ. ರವೀಂದ್ರ ವಿಶೇಷ ಉಪನ್ಯಾಸ ನಡೆಸಿಕೊಟ್ಟರು. ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ರಶ್ಮಿ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಡ್ಯಾರಿಲ್ ಕ್ಲೇಟ್ ಕ್ವಾಡ್ರೋಸ್ ಕಾರ್ಯಕ್ರಮ ನಿರೂಪಿಸಿದರು, ಸ್ತುತಿ ಎಸ್. ಚೌಟ ಸ್ವಾಗತಿಸಿ, ಅಮೃತಾ ಜೆ. ವಂದಿಸಿದರು.