image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ನುಡಿಸಿರಿ-ವಿರಾಸತ್ 2027: ಜನವರಿ 6ರಿಂದ 10ರವರೆಗೆ ಐದು ದಿನಗಳ ಸಂಭ್ರಮದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ

ಆಳ್ವಾಸ್ ನುಡಿಸಿರಿ-ವಿರಾಸತ್ 2027: ಜನವರಿ 6ರಿಂದ 10ರವರೆಗೆ ಐದು ದಿನಗಳ ಸಂಭ್ರಮದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ

ಮಂಗಳೂರು: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾದ 'ಆಳ್ವಾಸ್ ವಿರಾಸತ್' ಹಾಗೂ ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ'ಯು ಈ ವರ್ಷ ಒಟ್ಟಿಗೆ ಜನವರಿ 06, 2027 ರಿಂದ ಜನವರಿ 10, 2027 ರವರೆಗೆ ಒಟ್ಟು 5 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ  ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ  ಮಾಹಿತಿ ನೀಡಿದ ಅವರು, ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯು ದಿನಾಂಕ 07-01-2027ರ ಗುರುವಾರ ಬೆಳಗ್ಗೆ ಉದ್ಘಾಟನೆಗೊಂಡು ಜನವರಿ 09ರ ಶನಿವಾರ ಸಂಜೆವರೆಗೆ ಮೂರು ದಿನಗಳ ಕಾಲ ಜರುಗಲಿದೆ.

ಈ ಬಾರಿಯ ಆಳ್ವಾಸ್ ನುಡಿಸಿರಿಯ ಮುಖ್ಯ ಪರಿಕಲ್ಪನೆಯಾಗಿ 'ಕನ್ನಡ ಮನಸ್ಸು : ಭವಿಷ್ಯದ ಕನಸು' ಎಂಬುದನ್ನು ನಿಗದಿಪಡಿಸಲಾಗಿದೆ. ಇದು ಯುವ ಜನತೆಯನ್ನು ಕೇಂದ್ರವಾಗಿಸಿಕೊಂಡಿದ್ದು, ಬದಲಾಗುತ್ತಿರುವ ಸಮಾಜದಲ್ಲಿ ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆಯ ಮೂಲಕ ಕರ್ನಾಟಕದ ಭವಿಷ್ಯವನ್ನು ಕಟ್ಟುವ ಸಂಕಲ್ಪ ಹೊಂದಿದೆ.

ಕನ್ನಡದ ಪ್ರಮುಖ ವಿಮರ್ಶಕರು ಹಾಗೂ ವಿದ್ವಾಂಸರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಆಳ್ವಾಸ್ ನುಡಿಸಿರಿ-2027ರ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ. ಹಿರಿಯ ಪತ್ರಕರ್ತರು, ಪ್ರಬುದ್ಧ ಚಿಂತಕರು ಹಾಗೂ ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರು ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಜನವರಿ 6ರಂದು ಸಂಜೆ ವೇದಘೋಷ, ಭಜನೆ, ಪುಷ್ಪಪಲ್ಲಕ್ಕಿ ಹಾಗೂ ಮಂಗಳವಾದ್ಯಗಳೊಂದಿಗೆ ಆಳ್ವಾಸ್ ವಿರಾಸತ್‌ಗೆ ಭವ್ಯ ಚಾಲನೆ ಸಿಗಲಿದೆ ಎಂದರು.

ಹರಿದ್ವಾರದಿಂದ ಆಗಮಿಸುವ ಗಂಗಾರತಿ ತಂಡವು ರಥಾರತಿಯನ್ನು ನೆರವೇರಿಸಲಿದೆ. ಜನವರಿ 6 ಮತ್ತು 7ರಂದು ಕರಾವಳಿ ಪರಿಸರ ಸಂರಕ್ಷಣೆ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗಾಗಿ 'ಹಸಿರು ಸಂವಾದ' ರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು, ಪಾವಂಜೆ, ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶದ 50ಕ್ಕೂ ಅಧಿಕ ಗ್ರಾಮಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಗಿದೆ.

ಉತ್ಸವದ ಅಂಗವಾಗಿ ರಾಜ್ಯಮಟ್ಟದ ಭಾರತ್ ಸೈಟ್ಸ್ ಆ್ಯಂಡ್ ಗೈಡ್ಸ್ ಸಾಂಸ್ಕೃತಿಕ ಜಂಬೂರಿ, 800 ವಿದ್ಯಾರ್ಥಿಗಳಿಗೆ ಉಚಿತ ಸಂಗೀತ ಹಾಗೂ ಶಾಸ್ತ್ರೀಯ ಕಲಾ ತರಬೇತಿ ಕಾರ್ಯಾಗಾರ, ಜನವರಿ 8ರಂದು 'ಆಳ್ವಾಸ್ ವಿದ್ಯಾರ್ಥಿಸಿರಿ' ಹಾಗೂ ಜನವರಿ 9ರಂದು ಪ್ರಥಮ ಬಾರಿಗೆ 'ಆಳ್ವಾಸ್ ಯುವಸಿರಿ' ಕಾರ್ಯಕ್ರಮಗಳು ಜರುಗಲಿವೆ. ಜೊತೆಗೆ ಕೃಷಿಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಪುಸ್ತಕ ಮೇಳ ಹಾಗೂ ಕಲಾ ಮೇಳಗಳು ವಿಶೇಷ ಆಕರ್ಷಣೆಯಾಗಿರಲಿವೆ. ಈ ಸಾಂಸ್ಕೃತಿಕ ಮಹೋತ್ಸವದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಇಚ್ಚಿಸುವವರು ರೂ. 500 ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರೀ ವೇಣುಗೋಪಾಲ ಶೆಟ್ಟಿ ಹಾಗೂ ಕಾರ್ಯಾಕಾರಿ ಸಮಿತಿ ಸದಸ್ಯರಾದ ಶ್ರೀ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ