ಮಂಗಳೂರು: ಮೂಡುಶೆಡ್ಡೆ ಹಾಗೂ ಜೋಕಟ್ಟೆ ಸೇರಿದಂತೆ ವಿವಿಧೆಡೆ ಫಾರ್ಮ್ ನಂಬರ್ 7 ಅನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಂಡು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಗಳ ನೈಜ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಹುನ್ನಾರ ನಡೆಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯು ಗಂಭೀರ ಆರೋಪ ಮಾಡಿದೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಪೂಜಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಈ ಕುರಿತು ವಿಸ್ತೃತ ವಿವರಗಳನ್ನು ಹಂಚಿಕೊಂಡಿದ್ದಾರೆ.
ಜೋಕಟ್ಟೆ ಹಾಗೂ ಮೂಡುಶೆಡ್ಡೆ ಪ್ರದೇಶಗಳಲ್ಲಿ ಸೆಪ್ಟೆಂಬರ್ 22ರಂದು ಅರ್ಜಿಗಳನ್ನು ಸಲ್ಲಿಸಿ, ಕೇವಲ ಒಂದೇ ಕಡೆ 38 ರಿಂದ 61 ರಷ್ಟು ಕ್ರೈಸ್ತ ಧರ್ಮದ ಮತದಾರರ ಹಾಗೂ ಅಲ್ಪಸಂಖ್ಯಾತರ ಹೆಸರುಗಳನ್ನು ಡಿಲೀಟ್ ಮಾಡಲು ನಕಲಿ ಅರ್ಜಿಗಳನ್ನು ನೀಡಲಾಗಿದೆ ಎಂದು ಪದ್ಮರಾಜ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ವಿರೋಧಿ ಕೃತ್ಯಗಳನ್ನು ಎಸಗುವವರನ್ನು ಬಿಜೆಪಿ ಪಕ್ಷವು ರಕ್ಷಿಸುತ್ತಿದೆ ಎಂದು ಟೀಕಿಸಿದ ಅವರು, ಯಾರ ಮೇಲಾದರೂ ಎಫ್‌ಐಆರ್ ದಾಖಲಾದರೆ ಪೊಲೀಸ್ ಸ್ಟೇಷನ್‌ಗೆ ನುಗ್ಗುತ್ತೇವೆ ಎಂದು ಹಿರಿಯ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳು ಅವರ ಕೀಳುಮಟ್ಟದ ರಾಜಕಾರಣವನ್ನು ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದರು.
ಈ ಅಕ್ರಮ ಯತ್ನದ ವಿರುದ್ಧ ಕಾಂಗ್ರೆಸ್ ಪಕ್ಷವು ಕಾನೂನು ಹೋರಾಟ ನಡೆಸಿದ್ದು, ಮಂಗಳೂರು ತಾಲೂಕು ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 68 ಫಾರ್ಮ್ ನಂಬರ್ 7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಕೋರ್ಟ್ ನಿರ್ದೇಶನದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ನಾಲ್ವರು ಪ್ರೆಸಿಡೆಂಟ್‌ಗಳ ಹಾಗೂ ಸಂಬಂಧಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸ್ ಠಾಣೆಯಲ್ಲೂ ಅನಿಶಾ, ಅನಿಶಾ ಬಾನು, ಅಬ್ದುಲ್ ಲತೀಫ್, ನಫೀಸಾ, ಮೊಹಮ್ಮದ್ ಅಲ್ತಾಫ್, ಮೊಹಮ್ಮದ್ ಅಸ್ಫಕ್ ಹಾಗೂ ಫಯಾಜ್ ಎಂಬುವವರ ದೂರಿನ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಮಿಥುನ್ ರೈ ತಿಳಿಸಿದರು. ಕರಡು ಮತದಾರರ ಪಟ್ಟಿಯಲ್ಲಿ ಹೆಸರಿದ್ದವರ ಮುಖಾಂತರವೇ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕೇವಲ ಮತದಾರರ ಹಕ್ಕನ್ನು ಕಸಿಯುವುದಷ್ಟೇ ಅಲ್ಲದೆ, ಸರ್ಕಾರದ ಸೌಲಭ್ಯಗಳು ಮತ್ತು ಯೋಜನೆಗಳು ಅಂತಹವರಿಗೆ ಸಿಗದಂತೆ ತಡೆಯುವ ಕ್ರೂರ ಮನಸ್ಥಿತಿ ಇದರ ಹಿಂದೆ ಇದೆ. ಈ ಕೃತ್ಯದಲ್ಲಿ ಯಾರೇ ಅಧಿಕಾರಿಗಳು ಶಾಮೀಲಾಗಿದ್ದರೂ ಅವರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಒಬ್ಬರೇ ಒಬ್ಬ ನೈಜ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟುಹೋಗದಂತೆ ಎಚ್ಚರಿಕೆ ವಹಿಸಲಾಗುವುದು ಮತ್ತು ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷವು ಬದ್ಧತೆಯಿಂದ ಹೋರಾಡಲಿದೆ ಎಂದು ಸ್ಪಷ್ಟಪಡಿಸಿದರು.