ಮಂಗಳೂರು : ಕಡಲ ತೀರದ ಭಾರ್ಗವ, ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ 123ನೇ ಹುಟ್ಟು ಹಬ್ಬದ ಸಲುವಾಗಿ ಕಲ್ಕೂರ ಪ್ರತಿಷ್ಠಾನದಿಂದ ನೀಡಲಾಗುವ "ಕಾರಂತ ಪ್ರಶಸ್ತಿ -2026"ನ್ನು ಹಿರಿಯ ಮಹಿಳಾ ಸಾಹಿತಿ, ಕಾದಂಬರಿಕಾರ್ತಿ ವೈದೇಹಿಯವರಿಗೆ ಪ್ರದಾನ ಮಾಡಲಾಗುವುದು ಎಂದು ಕಾರಂತ ಸಮಿತಿಯ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 10 ಶನಿವಾರ ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಪತ್ತುಮುಡಿ ಸೌಧದ ಸಭಾಂಗಣದಲ್ಲಿ ದಿವಂಗತ ಪತ್ತುಮುಡಿ ಸೂರ್ಯನಾರಾಯಣ ರಾವ್ ಸಂಸ್ಮರಣೆಯೊಂದಿಗೆ ಜರಗಲಿರುವುದು. ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ| ಬಿ.ಎ. ವಿವೇಕ ರೈ ಕಾರಂತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರಂತ ಸಂಸ್ಮರಣೆ ಗೈಯ್ಯುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಲ್. ಧರ್ಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು. ಪ್ರಬಂಧ ಸ್ಪರ್ಧೆ ವಿಜೇತರಿಗೆ ಹಿರಿಯ ಸಾಹಿತಿಗಳಾದ ಶ್ರೀಮತಿ ಭುವನೇಶ್ವರಿ ಹೆಗಡೆ ಬಹುಮಾನ ವಿತರಿಸಲಿದ್ದು, ಅಂತರಶಾಲೆಯಲ್ಲಿ ಕಾರಂತರ ಚಿತ್ರರಚನಾ ಸ್ಪರ್ಧೆಯ ವಿಜೇತರಿಗೆ ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಎಸ್. ಭಟ್, ಬಹುಮಾನ ವಿತರಿಸುವರು.
ಶಾಸಕ ಡಾ. ವೇದವ್ಯಾಸ ಕಾಮತ್ ಅಧ್ಯಕ್ಷತೆವಹಿಸಲಿದ್ದು, ಪ್ರಧಾನ ಅಭ್ಯಾಗತರಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ| ಬ್ರಿಜೇಶ್ ಚೌಟ ಹಾಗೂ ವಿಧಾನ ಪರಿಷತ್ತು ಸದಸ್ಯರಾದ ಐವನ್ ಡಿಸೋಜ ಭಾಗವಹಿಸಲಿದ್ದು, ಅಭ್ಯಾಗತರಾಗಿ ಕರಾವಳಿ ಲೇಖಕಿಯರ ಸಂಘದ ಅಧ್ಯಕ್ಷರಾದ ಶಕುಂತಳಾ ಟಿ. ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ| ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯ ಸಮೂಹದ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್., ಹಿರಿಯ ಸಾಹಿತಿ ಹೆಚ್. ಶಾಂತರಾಜ ಐತಾಳ್, ತುಳು ಒಕ್ಕೂಟದ ಅಧ್ಯಕ್ಷರಾದ ಎ.ಸಿ. ಭಂಡಾರಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ| ಎಂ.ಪಿ. ಶ್ರೀನಾಥ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಕ್ಟೋಬರ್ 10 ಶನಿವಾರದಂದು ಬೆಳಿಗ್ಗೆ 9.30ರಿಂದ ಸುಗಮ ಸಂಗೀತ ರೇಖಾಂಕರ ಬಳಗ, ರಜನಿ ಮಲ್ಯ, ಅದಿತಿ ಗಾಣಿಗ, ರೋಹಿತ್ ಉಪಾಧ್ಯಾಯ ಇವರಿಂದ 10ಕ್ಕೆ ಸರಿಯಾಗಿ ಸಭಾಕಾರ್ಯಕ್ರಮ. ಕಾರಂತ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಅಲ್ಲದೆ ಬಹುಮಾನ ವಿತರಣೆ ಸಾಧಕ ಬಂಧುಗಳಿಗೆ ಗೌರವಾ Nov 12 ಗಂಟೆಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿರುವುದು. ಕಾರಂತ ಅಭಿಮಾನಿಗಳು ಭಾಗವಹಿಸಬೇಕೆಂದು ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾ ಪ್ರಸಾದ್ ಕಾರಂತ್ – ಪ್ರೊ. ಜಿ. ಕೆ. ಭಟ್ ಚಂಡಾಡಿ, ಜನಾರ್ದನ ಹಂದೆ – ಕಲಾ ಸಾಹಿತಿಗಳು, ವಿಜಯಲಕ್ಷ್ಮಿ ಶೆಟ್ಟಿ, ಪೂರ್ಣಿಮಾ ರಾವ್ ಶೆಟ್ಟಿ ಉಪಸ್ಥಿತರಿದ್ದರು.