ಮಂಗಳೂರು: ನಗರದ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ.) ಸೇವಾ ಸಂಸ್ಥೆಯ 88ನೇ ವರ್ಷದ ಸಂಸ್ಥಾಪನಾ ದಿನಾಚರಣೆಯು ಅಕ್ಟೋಬರ್ 10, ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಕದ್ರಿಯಲ್ಲಿರುವ ಸುಧೀರ ಸಿ.ವಿ. ನಾಯಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ಡಾ. ಕಸ್ತೂರಿ ಮೋಹನ ಪೈ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
1938ರಲ್ಲಿ ಸಂಸ್ಥಾಪನೆಗೊಂಡ ಈ ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದೆ. ಬಡ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಅಪಾರ್ಟ್‌ಮೆಂಟ್ ಮನೆಗಳನ್ನು ನಿರ್ಮಿಸಿಕೊಟ್ಟಿರುವುದು, 5 ಲಕ್ಷಕ್ಕೂ ಅಧಿಕ ಉಚಿತ ನೋಟ್‌ಬುಕ್ ಮತ್ತು ಶೈಕ್ಷಣಿಕ ಪರಿಕರ ವಿತರಣೆ, ಹಾಗೂ 1 ಕೋಟಿಗೂ ಹೆಚ್ಚು ಮೊತ್ತದ ವಿದ್ಯಾರ್ಥಿವೇತನ ನೀಡಿದ ಹೆಗ್ಗಳಿಕೆ ಸಂಸ್ಥೆಗಿದೆ. 1940ರಿಂದಲೇ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದ್ದು, ಪ್ರಸ್ತುತ ಹಿರಿಯ ನಾಗರಿಕರಿಗೆ ಉಚಿತ ಔಷಧ ವಿತರಣೆಯನ್ನೂ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ 10ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗಿನ ಸಾಧಕ 150 ವಿದ್ಯಾರ್ಥಿಗಳಿಗೆ 'ಶೈಕ್ಷಣಿಕ ಉದ್ಯೋಗಿಕ ಕ್ಷಮತೆ' ಪ್ರತಿಭಾ ಪುರಸ್ಕಾರ ಮತ್ತು 'ವಾಗ್ದೇವಿ ಶಿಕ್ಷಣ ಪುರಸ್ಕಾರ' ನೀಡಲಾಗುವುದು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಸಾಂಸ್ಕೃತಿಕ, ಪ್ರಬಂಧ ಮತ್ತು ಕೊಂಕಣಿ ಭಾಷಾ ಅನುವಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಂತ ಅಲೋಶಿಯಸ್ ಕಾಲೇಜಿನ ಐ.ಟಿ. ಅಧ್ಯಾಪಕಿ ಡಾ. ಆರತಿ ಶಾನ್‌ಭಾಗ್ ಆಗಮಿಸಲಿದ್ದಾರೆ. ಇದೇ ವೇಳೆಯಲ್ಲಿ ಧಾರ್ಮಿಕ ಮಾರ್ಗದರ್ಶಕರಾದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿ ಅವರಿಗೆ ಶತಮಾನೋತ್ಸವ ನಮನ ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷ ಕಸ್ತೂರಿ ಮಂಗೇಶ ಪೈ ಅವರಿಗೆ ಶತಮಾನದ ಗೌರವ ಸಲ್ಲಿಸಲಾಗುವುದು ಎಂದು ತಿಳಿಸಿದರು. ಜೊತೆಗೆ ಕರಾವಳಿಯ ಪ್ರಸಿದ್ಧ ಸಂಸ್ಥೆಗಳಾದ ನ್ಯೂ ತಾಜ್ ಮಹಾಲ್ ಕೆಫೆ, ಸಿಟಿ ಬೇಕರಿ ಮತ್ತು ಸ್ಕೂಲ್ ಬುಕ್ ಕಂಪನಿಗಳಿಗೆ ಶತಮಾನೋತ್ಸವ ಗೌರವ ಸನ್ಮಾನ ನೆರವೇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌರವ ಖಜಾಂಚಿ ಕುಂಬ್ಳೆ ನರಸಿಂಹ ಪ್ರಭು, ಜಂಟಿ ಕಾರ್ಯದರ್ಶಿ ಡಾ. ಎ. ರಮೇಶ ಪೈ, ಆಡಳಿತಾಧಿಕಾರಿ ವೆಂಕಟೇಶ ಎನ್. ಬಾಲಿಗಾ, ಕೊಂಕಣಿ ಕಾರ್ಯಕ್ರಮ ಸಂಯೋಜಕ ಎಂ. ರಾಧಾಕೃಷ್ಣ ಕಾಮತ್ ಹಾಗೂ ಪದಾಧಿಕಾರಿಗಳಾದ ಶಾಂಭವಿ ಪ್ರಭು ಮತ್ತು ಮಂಗಳಾ ಭಟ್ ಉಪಸ್ಥಿತರಿದ್ದರು.