ಮೂಡುಬಿದಿರೆ: ಸಕ್ಷಮಾ–ಆಳ್ವಾಸ್ ಮಹಿಳಾ ಸಂಘ ಹಾಗೂ ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ 15 ದಿನಗಳ ‘ಆರಿ ಲಹರಿ – ಸ್ವಾವಲಂಬನೆಯತ್ತ ಮೊದಲ ಹೆಜ್ಜೆ’ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಿಜಾರ್‌ನ ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಜಿರೆಯ ರೂಡ್‌ಸೆಟ್ ಅಧ್ಯಾಪಕ ಅಬ್ರಹಾಂ ಜೇಮ್ಸ್ ಪಿ.ವಿ. ಮಾತನಾಡಿ, ಕಲಿತ ಪ್ರತಿಯೊಂದು ಕೌಶಲ್ಯವೂ ಬದುಕಿನಲ್ಲಿ ಯಾವುದಾದರೂ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಕೌಶಲ್ಯವನ್ನು ಪ್ರಮಾಣಪತ್ರಕ್ಕೆ ಸೀಮಿತಗೊಳಿಸದೆ, ನಿರಂತರ ಅಭ್ಯಾಸ ಹಾಗೂ ಆತ್ಮವಿಶ್ವಾಸದಿಂದ ಆದಾಯದ ಮೂಲವನ್ನಾಗಿ ಪರಿವರ್ತಿಸಿ ಸ್ವಂತ ಉದ್ಯೋಗಾವಕಾಶ ಸೃಷ್ಟಿಸಿಕೊಳ್ಳಬೇಕು ಎಂದರು.
ಭಾರತ್ ಇನ್‌ಫ್ರಾಟೆಕ್ ಆಡಳಿತ ನಿರ್ದೇಶಕ ಮೊಹಮ್ಮದ್ ಮುಸ್ತಫಾ ಮಾತನಾಡಿ, ಕಸೂತಿ ಕೌಶಲ್ಯಕ್ಕೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಅವಕಾಶಗಳಿದ್ದು, ಕಲಿತ ಜ್ಞಾನವನ್ನು ಸಣ್ಣ ಉದ್ಯಮವಾಗಿ ಬೆಳೆಸಿ ಆರ್ಥಿಕವಾಗಿ ಸ್ವತಂತ್ರರಾಗಬಹುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಮಹಿಳೆಯರಿಗೆ ಕೌಶಲ್ಯ ನೀಡುವುದು ಇಡೀ ಸಮಾಜಕ್ಕೆ ಹೊಸ ಅವಕಾಶ ಕಲ್ಪಿಸಿದಂತೆ. ಕಲಿತ ವಿದ್ಯೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದು ಸ್ವಾವಲಂಬನೆ ಸಾಧಿಸಬೇಕು ಎಂದು ಕರೆ ನೀಡಿದರು. ಮಂಗಳೂರು ಉತ್ತರದ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಕವಿತಾ ಕಾಮತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತರಬೇತಿ ಪೂರ್ಣಗೊಳಿಸಿದ 65 ಮಹಿಳೆಯರು ತಯಾರಿಸಿದ ಕಸೂತಿ ಕಲಾಕೃತಿಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಸಕ್ಷಮಾದ ಸಂಚಾಲಕಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ರೋಷನ್ ಪಿಂಟೋ ಹಾಗೂ ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ ಉಪಸ್ಥಿತರಿದ್ದರು. ಡಾ. ಪ್ರಜ್ಞಾ ದೇವಡಿಗ ಕಾರ್ಯಕ್ರಮ ನಿರೂಪಿಸಿದರು, ಡಾ. ಹೆರಾಲ್ಡ್ ರೋಷನ್ ಪಿಂಟೋ ಸ್ವಾಗತಿಸಿದರು, ಡಾ. ಪ್ರಜ್ಞಾ ಆಳ್ವ ಕಾರ್ಯಾಗಾರದ ವರದಿ ವಾಚಿಸಿದರು ಹಾಗೂ ಡಾ. ವಸುಮತಿ ಧನ್ಯವಾದ ಸಮರ್ಪಿಸಿದರು.