image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಿಲಿಕುಳದಲ್ಲಿ ಇಂದಿನಿಂದ ವಿಶ್ವ ಬಾಹ್ಯಾಕಾಶ ಸಪ್ತಾಹ ಆಚರಣೆ

ಪಿಲಿಕುಳದಲ್ಲಿ ಇಂದಿನಿಂದ ವಿಶ್ವ ಬಾಹ್ಯಾಕಾಶ ಸಪ್ತಾಹ ಆಚರಣೆ

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಬೆಂಗಳೂರಿನ ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರದ (URSC) ಜಂಟಿ ಸಹಯೋಗದೊಂದಿಗೆ ಅಕ್ಟೋಬರ್ 7 ಮತ್ತು 8 ರಂದು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ 'ವಿಶ್ವ ಬಾಹ್ಯಾಕಾಶ ಸಪ್ತಾಹ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಪರಿಚಯಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

ಜಾಗತಿಕವಾಗಿ ಪ್ರತಿ ವರ್ಷ ಅಕ್ಟೋಬರ್ 4 ರಿಂದ 10 ರವರೆಗೆ ಆಚರಿಸಲಾಗುವ ಈ ಸಪ್ತಾಹದ ಅಂಗವಾಗಿ, ಎರಡು ದಿನಗಳ ಕಾಲ ಇಸ್ರೋ ವತಿಯಿಂದ ವಿಜ್ಞಾನ ಹಾಗೂ ತಂತ್ರಜ್ಞಾನ ಮಾದರಿಗಳ ಪ್ರದರ್ಶನ ನಡೆಯಲಿದೆ. ವಿದ್ಯಾರ್ಥಿಗಳಿಗೆ ಇಸ್ರೋ ವಿಜ್ಞಾನಿಗಳೊಂದಿಗೆ ನೇರ ಸಂವಾದ, ತಜ್ಞರ ಉಪನ್ಯಾಸ, ಉಪಗ್ರಹ ಮಾದರಿ ತಯಾರಿಕಾ ಸ್ಪರ್ಧೆ, ರಸಪ್ರಶ್ನೆ, ಸ್ಮರಣಶಕ್ತಿ ಪರೀಕ್ಷೆ ಮತ್ತು ವಾಟರ್ ರಾಕೆಟ್ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಇದರೊಂದಿಗೆ ತಾರಾಲಯ ಪ್ರದರ್ಶನ ಮತ್ತು ವಿಜ್ಞಾನ ಕೇಂದ್ರದ ಗ್ಯಾಲರಿಗಳ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ.

ವಿವಿಧ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ತರಗತಿಯ ಹೊರಗೆ ಬಾಹ್ಯಾಕಾಶ ವಿಜ್ಞಾನದ ಪ್ರಾಯೋಗಿಕ ಅನುಭವ ನೀಡಲು ಈ ಕಾರ್ಯಕ್ರಮ ವೇದಿಕೆ ಒದಗಿಸಲಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಮುಕ್ತ ಹಾಗೂ ಉಚಿತ ಪ್ರವೇಶವಿದ್ದು, ಖಗೋಳಶಾಸ್ತ್ರ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿಯುಳ್ಳ ಎಲ್ಲರೂ ಭಾಗವಹಿಸಿ ಇದರ ಪ್ರಯೋಜನ ಪಡೆಯಬಹುದು ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ