ಮೂಡುಬಿದಿರೆ: ಪ್ರಕೃತಿಯ ಮೇಲಿನ ಪ್ರೀತಿಯನ್ನು ಕೇವಲ ಹವ್ಯಾಸವಾಗಿ ಸೀಮಿತಗೊಳಿಸದೆ, ಅದನ್ನೇ ಅರ್ಥಪೂರ್ಣ ಹಾಗೂ ಭವಿಷ್ಯ ರೂಪಿಸುವ ವೃತ್ತಿಜೀವನವನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶ ಇಂದು ಯುವಜನತೆಗೆ ಹೆಚ್ಚಾಗಿದೆ ಎಂದು ಮೂಡುಬಿದಿರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಐಎಫ್‌ಎಸ್) ಆಕಾಶ್ ಧನಜಿ ಕದಂ ಹೇಳಿದರು. ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ (ಕುಂದಾಪುರ ವಿಭಾಗ, ಮೂಡುಬಿದಿರೆ ಉಪವಿಭಾಗ ಹಾಗೂ ಮೂಡುಬಿದಿರೆ ವಲಯ) ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಆಳ್ವಾಸ್ ಕುವೆಂಪು ಹಾಲ್‌ನಲ್ಲಿ ಆಯೋಜಿಸಲಾಗಿದ್ದ 72ನೇ ವನ್ಯಜೀವಿ ಸಪ್ತಾಹ–2026ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಆಧಾರಿತ ನಕ್ಷೆ ತಯಾರಿ, ದೂರ ಸಂವೇದಿ ತಂತ್ರಜ್ಞಾನ, ಡ್ರೋನ್ ಸಮೀಕ್ಷೆ, ವನ್ಯಜೀವಿ ಗಣತಿ, ಜೀವವೈವಿಧ್ಯ ದಾಖಲಾತಿ, ಪರಿಸರ ಸಂಶೋಧನೆ ಹಾಗೂ ಪರಿಸರ ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯುವಜನತೆಗೆ ಉತ್ತಮ ವೃತ್ತಿ ಅವಕಾಶಗಳಿವೆ ಎಂದು ತಿಳಿಸಿದ ಅವರು, ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳ ಮೂಲಕವೂ ಈ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಮಾನವಕೇಂದ್ರಿತ ಚಿಂತನೆಯಿಂದ ಹೊರಬಂದು ಪರಿಸರ ಮತ್ತು ಜೀವಕೇಂದ್ರಿತ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು. ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶವಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು, ಅಕ್ಟೋಬರ್ 2ರಿಂದ 8ರವರೆಗೆ ನಡೆಯುವ ವನ್ಯಜೀವಿ ಸಪ್ತಾಹವು ಜನರ ಸಾತತ್ಯಪೂರ್ಣ ಜಾಗೃತಿ ಅಭಿಯಾನವಾಗಬೇಕು ಎಂದರು. ಕೆಎಂಎಫ್ ಮಂಗಳೂರು ನಿರ್ದೇಶಕ ಸುಚರಿತ ಶೆಟ್ಟಿ ಮಾತನಾಡಿ, ಪಶ್ಚಿಮ ಘಟ್ಟ, ಜಲಮೂಲಗಳು ಹಾಗೂ ನೆಲ-ಮಣ್ಣಿನ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕಿದೆ ಎಂದು ಹೇಳಿದರು. ಪ್ರಾprincipal/ಪ್ರಾ his ಾಂಶುಪಾಲ ಡಾ. ಕುರಿಯನ್, ಪರಿಸರ ಪ್ರೇಮಿ ವಿನೀಶ್ ಪೂಜಾರಿ ಹಾಗೂ ಬೆಳವಾಯಿಯ ಚಿಟ್ಟೆ ಪಾರ್ಕ್‌ನ ಸಮ್ಮಿಲನ್ ಶೆಟ್ಟಿ ಅವರು ನೈಸರ್ಗಿಕ ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆಯ ಕುರಿತು ಮಾತನಾಡಿದರು.
ವನ್ಯಜೀವಿ ಸಪ್ತಾಹದ ಭಾಗವಾಗಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅರಿವು ಮೂಡಿಸಲು ಕಡಲಕೆರೆ ನರ್ಸರಿ, ಮೂಡುಬಿದಿರೆ ವಲಯ ಅರಣ್ಯ ಕಚೇರಿ, ಕೇರ್ವಾಸೆ ಕಳ್ಳಬೇಟೆ ತಡೆ ಶಿಬಿರ ಹಾಗೂ ಮಾಳ ಅರಣ್ಯ ತಪಾಸಣಾ ಠಾಣೆಗಳ ಕಾರ್ಯವೈಖರಿಯನ್ನು ಪರಿಚಯಿಸಲಾಯಿತು. ಅರಣ್ಯ ಗಸ್ತು ಮತ್ತು ಮೇಲ್ವಿಚಾರಣೆಯಲ್ಲಿ ಬಳಸುವ ವಾಕಿಟಾಕಿ, ಜಿಪಿಎಸ್, ಕ್ಯಾಮೆರಾ ಟ್ರಾಪ್ ಹಾಗೂ ಡ್ರೋನ್ ಮುಂತಾದ ತಾಂತ್ರಿಕ ಸಾಧನಗಳ ಪ್ರಾಯೋಗಿಕ ಪ್ರದರ್ಶನ ನೀಡಿದ ಅಧಿಕಾರಿಗಳು, ವನ್ಯಜೀವಿ ಅಪರಾಧ ಹಾಗೂ ಕಳ್ಳಬೇಟೆ ತಡೆಯುವ ವಿಧಾನಗಳನ್ನು ವಿವರಿಸಿದರು. ಕಾರ್ಯಕ್ರಮವನ್ನು ಶ್ರೀಶಾ ನಿರೂಪಿಸಿದರೆ, ರಧ್ವಾ ಧನ್ಯವಾದ ಸಮರ್ಪಿಸಿದರು.