ಮೂಡುಬಿದಿರೆ: ಮಿಜಾರು ಆವರಣದಲ್ಲಿರುವ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 24ನೇ ಪದವಿ ಹಾಗೂ 13ನೇ ಸ್ನಾತಕೋತ್ತರ ಪದವಿ ಬ್ಯಾಚ್‌ಗಳ ಶೈಕ್ಷಣಿಕ ಪಯಣಕ್ಕೆ ಚಾಲನೆ ನೀಡುವ ‘ಆರಂಭಂ’ ಕಾರ್ಯಕ್ರಮ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಡಿಗೆರೆ ಹೊಯ್ಸಳ ಹೆಲ್ತ್ ಕೇರ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಅರ್ಪಿತಾ ಪ್ರತಾಪ್ ಸಿಂಹ, ವೈದ್ಯಕೀಯ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ಕಠಿಣ ಪರಿಶ್ರಮ ಅತ್ಯಗತ್ಯ ಎಂದು ಹೇಳಿದರು. ವಿದ್ಯಾರ್ಥಿ ಜೀವನದಲ್ಲಿ ಅನಿರೀಕ್ಷಿತ ಸವಾಲುಗಳು ಹಾಗೂ ಸೋಲುಗಳು ಎದುರಾಗಬಹುದು; ಅಂತಹ ಸಂದರ್ಭದಲ್ಲಿ ಎದೆಗುಂದದೆ, ಸೋಲಿನಿಂದ ಪಾಠ ಕಲಿತು ಮುನ್ನಡೆಯಬೇಕು. ವೈದ್ಯಕೀಯ ವೃತ್ತಿಯಲ್ಲಿ ಜ್ಞಾನ ಮತ್ತು ಕೌಶಲ್ಯದಷ್ಟೇ ರೋಗಿಗಳೊಂದಿಗೆ ಅವರ ಮಾತೃಭಾಷೆಯಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವುದು ಮುಖ್ಯವಾಗಿದ್ದು, ಇದು ರೋಗಿ ಮತ್ತು ವೈದ್ಯರ ನಡುವಿನ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೆ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಮೂಲಕ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಶೈಕ್ಷಣಿಕ ಛಾಪು ಮೂಡಿಸಬೇಕು ಹಾಗೂ ಧೈರ್ಯದಿಂದ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ, ಸರ್ವಾಂಗಾಸನ ಭಂಗಿಯಲ್ಲಿ ದೀರ್ಘಕಾಲ ಇದ್ದ ಸಾಧನೆಗಾಗಿ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಮಾನ್ಯತೆ ಪಡೆದ ಕಾಲೇಜಿನ ವಿದ್ಯಾರ್ಥಿ ವಿಕಾಸ್ ಅವರನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಮತ್ತು ಉಪಪ್ರಾಂಶುಪಾಲೆ ಡಾ. ವಿದ್ಯಾರಾಣಿ ಉಪಸ್ಥಿತರಿದ್ದರು. ಯೋಗೇಶ್ವರನ್ ಎಂ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಡಾ. ರಶ್ಮಿತಾ ಆಳ್ವ ಧನ್ಯವಾದ ಸಲ್ಲಿಸಿದರು.