ಮಂಗಳೂರು : ಮಂಗಳೂರಿನ ಶಕ್ತಿನಗರದ ವಿಶ್ವಕೊಂಕಣಿ ಕೇಂದ್ರದಲ್ಲಿ 2026ರ ಅಕ್ಟೋಬರ್ 3ರಂದು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ವತಿಯಿಂದ 'ಕನಕದಾಸರು ಕೊಂಕಣಿಯಲ್ಲಿ, ಕನಕದಾಸರ ಸಾಹಿತ್ಯ ಕೊಂಕಣಿಯಲ್ಲಿ: ವಿಚಾರಸಂಕಿರಣ ಮತ್ತು ಗೀತ ಗಾಯನ ಕಾರ್ಯಕ್ರಮ'ದ ಉದ್ಘಾಟನಾ ಸಮಾರಂಭವು ಜರುಗಿತು. ಪ್ರಸಿದ್ಧ ಅನುವಾದಕ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಶ್ರೀ ನಂದಗೋಪಾಲ ಶೆಣೈ ಅವರು ಅತಿಥಿಗಳನ್ನು ಸ್ವಾಗತಿಸಿ, ಕೊಂಕಣಿಯಲ್ಲಿ ಪ್ರಕಟವಾಗಿರುವ ಕನಕದಾಸರ ಸಾಹಿತ್ಯವನ್ನು ಕೊಂಕಣಿ ಭಾಷಿಕರಿಗೆ ತಲುಪಿಸುವ ಉದ್ದೇಶದಿಂದ ಈ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಶ್ರೀ ಕಾ.ತ. ಚಿಕ್ಕಣ್ಣ ಅವರ ಶುಭ ಸಂದೇಶವನ್ನು ಓದಿ ತಿಳಿಸಲಾಯಿತು.
ಮಂಗಳೂರು ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ಜಯವಂತ ನಾಯಕ್ ಅವರು ಕನಕದಾಸ ಕಾವ್ಯಗಳ ಮೂರು ಸಂಪುಟಗಳನ್ನು ಲೋಕಾರ್ಪಣೆ ಮಾಡಿದರು. ಸಂತ ಅಲೋಷಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯ ಫಾದರ್ ಪ್ರಶಾಂತ ಮಾಡ್ತಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಂಗಳೂರಿನ ಸಾಧನಾ ಬಳಗ ಮತ್ತು ನಾಟ್ಯ ಧಾರಾ ಮಹಿಳಾ ತಂಡದವರಿಂದ ‘ಕನಕದಾಸರ ಕೀರ್ತನೆಗಳ ಕುಣಿತ ಭಜನೆ’ ಹಾಗೂ ಉಪೇಂದ್ರ ಮಲ್ಯ ತಂಡದವರಿಂದ ‘ಶ್ರೀನಿವಾಸ ಕಲ್ಯಾಣ’ ಗೀತ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡವು.
ಕನಕದಾಸರ ಕೀರ್ತನೆಗಳ ವಿಚಾರಸಂಕಿರಣದಲ್ಲಿ ಕನಕದಾಸರ ಸಾಹಿತ್ಯವನ್ನು ಕೊಂಕಣಿಗೆ ಅನುವಾದಿಸಿರುವ ತಜ್ಞರಾದ ಡಾ. ಗೀತಾ ಶೆಣೈ, ಡಾ. ಬಿ. ದೇವದಾಸ ಪೈ, ಡಾ. ಸಂಧ್ಯಾ ನಾಯಕ್, ಡಾ. ಶೈಲಜಾ ಮಂಗಳೂರುಕಾರ, ಶ್ರೀಮತಿ ಶಕುಂತಳಾ ಆರ್. ಕಿಣಿ, ಶ್ರೀಮತಿ ಜಯಶ್ರೀ ಶೆಣೈ, ಶ್ರೀ ಮಧುಕರ ಮಲ್ಯ, ಡಾ. ಅರವಿಂದ ಶ್ಯಾನಭಾಗ್ ಮತ್ತು ಶ್ರೀಮತಿ ಸ್ಮಿತಾ ಶೆಣೈ ಅವರು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದರು. ಗೀತ-ಗಾಯನ ಕಾರ್ಯಕ್ರಮದಲ್ಲಿ ಪುತ್ತೂರು ನರಸಿಂಹ ನಾಯಕ್, ವಿದ್ವಾನ್ ಯೋಗೀಶ ಕಿಣಿ, ಶ್ರೀಮತಿ ಚೈತ್ರಾ ಪೈ, ಶ್ರೀ ರವೀಂದ್ರ ಪ್ರಭು, ಶ್ರೀ ಮುರಳೀಧರ ಕಾಮತ್, ಶ್ರೀಮತಿ ವರ್ಷಾ ಪ್ರಭು ಮತ್ತು ಶ್ರೀ ಪುತ್ತೂರು ಪಾಂಡುರಂಗ ನಾಯಕ ಅವರು ಕನಕದಾಸರ ಕೊಂಕಣಿ ಅನುವಾದಿತ ಹಾಡುಗಳನ್ನು ಸುಶ್ರಾವ್ಯವಾಗಿ ಗಾಯನ ಮಾಡಿದರು. ಈ ಸಂದರ್ಭದಲ್ಲಿ ಎಲ್ಲಾ ಹಾಡುಗಾರರನ್ನು ಮತ್ತು ಅನುವಾದಕರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಅಖಿಲ ಭಾರತ ಕೊಂಕಣಿ ಪರಿಷದ್ ನ 34ನೇ ಸಮ್ಮೇಳನದ ಅಧ್ಯಕ್ಷ ಪದಕ್ಕೆ ಚುನಾಯಿತರಾದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ್ ಶೆಣೈ ಅವರನ್ನು ಕೇಂದ್ರದ ವಿಶ್ವಸ್ಥ ಮಂಡಳಿಯು ಗೌರವಿಸಿತು. ಈ ವಿಷಯವನ್ನು ಕೇಂದ್ರದ ಟ್ರಸ್ಟಿ ಮೆಲ್ವಿನ್ ರೊಡ್ರಿಗಸ್ ಸಭೆಯಲ್ಲಿ ಮಂಡಿಸಿದರು. ಶ್ರೀ ಬಾಲಚಂದ್ರ ಪ್ರಭು ಅವರು ಕೊಂಕಣಿಯಲ್ಲಿ ರಾಗ ಸಂಯೋಜಿಸಿದ ಕನಕದಾಸರ ಕೀರ್ತನೆಯನ್ನು ಪ್ರಾರ್ಥನಾ ಗೀತೆಯಾಗಿ ಹಾಡಿದರು. ಶ್ರೀಮತಿ ಸುಚಿತ್ರಾ ಶೆಣೈ, ಸ್ಮಿತಾ ಶೆಣೈ ಮತ್ತು ಡಾ. ವಿಜಯಲಕ್ಷ್ಮೀ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಕೇಂದ್ರದ ಉಪಾಧ್ಯಕ್ಷರಾದ ವಿಲಿಯಂ ಡಿಸೋಜಾ, ರಮೇಶ್ ಡಿ. ನಾಯಕ್, ಟ್ರಸ್ಟಿ ಗಿಲ್ಬರ್ಟ್ ಡಿಸೋಜಾ, ಕೋಶಾಧಿಕಾರಿ ಬಿ.ಆರ್. ಭಟ್, ಆಡಳಿತ ಅಧಿಕಾರಿ ಡಾ. ಬಿ. ದೇವದಾಸ ಪೈ, ಪ್ರಧಾನ ಸಂಪಾದಕರಾದ ಡಾ. ಗೀತಾ ಶೆಣೈ ಹಾಗೂ ಪ್ರಾಯೋಜಕರಾದ ವರ್ಧನಿಯ ಶ್ರೀಮತಿ ಉಷಾ ನಂದಗೋಪಾಲ ಶೆಣೈ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು ಎರಡು ದಿನಗಳ ಕಾರ್ಯಕ್ರಮವನ್ನು ವೀಕ್ಷಿಸಿ ಸಂಭ್ರಮಿಸಿದರು.