ಮಂಗಳೂರು : ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ (CFAL) ಸಂಸ್ಥೆಯ ವಿದ್ಯಾರ್ಥಿಗಳ ರೋಬೋಟಿಕ್ಸ್ ತಂಡವು 2026 ರ ಅಕ್ಟೋಬರ್ 8 ರಿಂದ 10 ರವರೆಗೆ ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ‘ಬ್ಯಾಟಲ್ ಆಫ್ ರೋಬೋಟ್ಸ್ 2026’ ಕಾಂಬ್ಯಾಟ್ ರೋಬೋಟಿಕ್ಸ್ ಚಾಂಪಿಯನ್‌ಷಿಪ್‌ನ ಅರ್ಹತಾ ಹಂತದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದೆ. ಈ ಜಾಗತಿಕ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾದ ಕೇವಲ ಎರಡು ತಂಡಗಳಲ್ಲಿ CFAL ಕೂಡ ಒಂದಾಗಿದೆ.
ಈ ತಂಡದಲ್ಲಿ ಹರಿ ಪ್ರಸಾದ್ ಎಸ್ ಕೆ, ಮ್ಯಾಕ್ವಿನ್ ಗ್ರೆಗ್ ರೊಡ್ರಿಗಸ್, ಅನಘ ಎಸ್ ಆರ್, ಇಶಾನ್ ಜೆಮ್ಷಿಡ್, ಅಮೋಘ್ ಸಿ ನಾಯಕ್, ಸುಜಯ್ ಐತಾಳ, ಪ್ರಿಯಾಂಶು ಸ್ವರ್ಣಕಾರ್, ಲಿಖಿತ್ ಮಾಧವ ಅರ್ಕುಳ, ಬಿ ಮಂಥನ್ ಬಾಳಿಗಾ ಮತ್ತು ಆಲ್ಡ್ರೀನಾ ದಿಯಾ ರೊಡ್ರಿಗಸ್ ಎಂಬ 10 ವಿದ್ಯಾರ್ಥಿಗಳಿದ್ದಾರೆ. CFAL ತಂಡವು 1.5 ಕೆಜಿ ವಿಭಾಗದಲ್ಲಿ 'ಬುಲ್‌ಫ್ರಾಗ್' (Bullfrog) ಹಾಗೂ 'ಟ್ವಿನ್‌ರಿಫ್ಟ್' (Twinrift) ಎಂಬ ಎರಡು ರೋಬೋಟ್‌ಗಳನ್ನು ಕಣಕ್ಕಿಳಿಸಲಿದೆ. 'ಬುಲ್‌ಫ್ರಾಗ್' ರೋಬೋಟ್ 2025 ರ ಆವೃತ್ತಿಯಲ್ಲಿ 3 ನೇ ಸ್ಥಾನ ಪಡೆದಿತ್ತು. 'ಟ್ವಿನ್‌ರಿಫ್ಟ್' ನಾಲ್ಕು ಚಕ್ರಗಳ ಡ್ರೈವ್ ಸಿಸ್ಟಮ್ ಹೊಂದಿದ್ದು, ವಿವಿಧ ಶಸ್ತ್ರಾಸ್ತ್ರ ವಿನ್ಯಾಸಗಳನ್ನು ಒಳಗೊಂಡಿದೆ.
CFAL ನ ಮೇಕರ್‌ಸ್ಪೇಸ್ ಮುಖ್ಯಸ್ಥ ಸುಜನ್ ಶೆಟ್ಟಿ, ಸ್ಟೆಮ್ ಶಿಕ್ಷಕಿ ಹರ್ಷಿತಾ ನಾಯಕ್ ಹಾಗೂ 'ಟೆರರ್‌ಬುಲ್ ರೋಬೋಟಿಕ್ಸ್' ತಂಡದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ರೋಬೋಟ್‌ಗಳನ್ನು ಸ್ವತಃ ವಿನ್ಯಾಸಗೊಳಿಸಿ ನಿರ್ಮಿಸಿದ್ದಾರೆ. 2004 ರಲ್ಲಿ ಮಂಗಳೂರಿನಲ್ಲಿ ಸ್ಥಾಪಿತವಾದ CFAL ಸಂಸ್ಥೆಯು 'ದಿ ಲರ್ನಿಂಗ್ ಸೆಂಟರ್ ಟ್ರಸ್ಟ್' ನ ಒಂದು ಭಾಗವಾಗಿದ್ದು, JEE, NEET, ಒಲಿಂಪಿಯಾಡ್ ಹಾಗೂ ISI, CMI, IISER ನಂತಹ ಪ್ರಮುಖ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ.