image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗ್ಲ್ಯಾನಿಶ್ ಮಾರ್ಟಿಸ್‌ಗೆ 2026ರ 'ಕಿಟಾಳ್ ಯುವ ಪ್ರಶಸ್ತಿ' ಪ್ರದಾನ

ಗ್ಲ್ಯಾನಿಶ್ ಮಾರ್ಟಿಸ್‌ಗೆ 2026ರ 'ಕಿಟಾಳ್ ಯುವ ಪ್ರಶಸ್ತಿ' ಪ್ರದಾನ

ಮಂಗಳೂರು : ಮಂಗಳೂರಿನ ಎಂಸಿಸಿ ಬ್ಯಾಂಕಿನ ಫಿಎಫ್‌ಎಕ್ಸ್ ಸಲ್ಡಾನ್ಹಾ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅಲಂಗಾರಿನ ಯುವ ಕವಿ ಹಾಗೂ ಕಥೆಗಾರ ಗ್ಲ್ಯಾನಿಶ್ ಮಾರ್ಟಿಸ್ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ 'ಲಿಯೋ ರೊಡ್ರಿಗಸ್ ಕುಟುಂಬ ದತ್ತಿ ಕಿಟಾಳ್ ಯುವ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು. ಅಬುಧಾಬಿಯ ಖ್ಯಾತ ಉದ್ಯಮಿ ಹಾಗೂ ಕೊಂಕಣಿ ಬೆಂಬಲಿಗ ಲಿಯೋ ರೊಡ್ರಿಗಸ್ ಈ ಪುರಸ್ಕಾರವನ್ನು ಹಸ್ತಾಂತರಿಸಿದರು. ಕೊಂಕಣಿ ಸಾಹಿತ್ಯದಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ 15 ವರ್ಷಗಳ ಪರಂಪರೆಯ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೊಜಾ, ದೇರೆಬೈಲ್ ಧರ್ಮಕೇಂದ್ರದ ಪ್ರಧಾನ ಗುರುಗಳಾದ ಫಾ| ಜೋಸೆಫ್ ಮಾರ್ಟಿಸ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹಾಗೂ 'ಕಿಟಾಳ್' ಸಂಪಾದಕ ಎಚ್. ಎಮ್. ಪೆರ್ನಾಲ್ ಉಪಸ್ಥಿತರಿದ್ದರು. ಕಿಟಾಳ್ ಸಹ ಸಂಪಾದಕ ಕವಿ ವಿಲ್ಸನ್ ಕಟೀಲ್ ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ, ಸನ್ಮಾನ ಪತ್ರ ವಾಚಿಸಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಲಿಯೋ ರೊಡ್ರಿಗಸ್, ಯುವಜನರಲ್ಲಿ ಸಾಹಿತ್ಯಿಕ ಮತ್ತು ಸಮುದಾಯದ ಹೊಣೆಗಾರಿಕೆ ಬೆಳೆಸುವುದೇ ಈ ಪ್ರಶಸ್ತಿಯ ಮುಖ್ಯ ಉದ್ದೇಶ ಎಂದರು. ಇತ್ತೀಚಿನ ದಿನಗಳಲ್ಲಿ ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಬರುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಯುವ ಬರಹಗಾರರನ್ನು ಆಕರ್ಷಿಸಲು ಹಿರಿಯ ಸಾಹಿತಿಗಳು ಸಾಹಿತ್ಯಿಕ ಅಥವಾ ಸಾಂಸ್ಕೃತಿಕ ಶಿಬಿರಗಳನ್ನು ಆಯೋಜಿಸಿದರೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕೊಂಕಣಿ ಭಾಷೆ ಮತ್ತು ಕಲೆಗೆ ಸಲ್ಲಿಸಿದ ಅನನ್ಯ ಸೇವೆಯನ್ನು ಗೌರವಿಸಿ ಹಿರಿಯ ಸಾಧಕರಾದ ಡಾ| ಎವ್ಜಿನ್ ಡಿ ಸೋಜಾ (ಮೂಡುಬೆಳ್ಳೆ) ಹಾಗೂ ಎಡ್ಡಿ ಸಿಕ್ವೇರಾ ಅವರನ್ನು ಅವರ 80ನೇ ಮತ್ತು 75ನೇ ಜನ್ಮದಿನದ ಅಂಗವಾಗಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಫಾ| ಜೋಸೆಫ್ ಮಾರ್ಟಿಸ್ ಮಾತನಾಡಿ, ಅರಿಸ್ಟಾಟಲ್ ಅವರ "ಆಶ್ಚರ್ಯವೇ ಜ್ಞಾನದ ಆರಂಭ" ಎಂಬ ಉಕ್ತಿಯನ್ನು ಉಲ್ಲೇಖಿಸಿದರು. ಪ್ರತಿಯೊಬ್ಬ ಸಾಹಿತಿಯೂ ಈ ಬೆರಗನ್ನು ಅನುಭವಿಸಿದಾಗ ಸಾಹಿತ್ಯ ಹುಟ್ಟುತ್ತದೆ; ಬರಹಗಾರ ವಾಸ್ತವಿಕತೆಗೆ ಕನ್ನಡಿಯಾಗಿ ತನ್ನ ಚಿಂತನೆಗಳನ್ನು ವ್ಯಕ್ತಪಡಿಸುತ್ತಾನೆ ಮತ್ತು ಸಾಹಿತ್ಯದ ಮೂಲಕ ಅಮರನಾಗುತ್ತಾನೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗ್ಲ್ಯಾನಿಶ್ ಮಾರ್ಟಿಸ್, ತಮ್ಮ ಸಾಹಿತ್ಯಿಕ ಪಯಣಕ್ಕೆ ಪ್ರೇರಣೆಯಾದ ಕುಟುಂಬಸ್ಥರು ಹಾಗೂ ಮಾರ್ಗದರ್ಶನ ನೀಡಿದ ಹಿರಿಯ ಸಾಹಿತಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಇಂದಿನ ಯುವಕರಲ್ಲಿ ಬರವಣಿಗೆಯ ಆಸಕ್ತಿ ಮೂಡಿಸಲು ಓದುವ ಅಭ್ಯಾಸ ಬೆಳೆಸುವುದು ಅಗತ್ಯ ಎಂದ ಅವರು, ಈ ಪ್ರಶಸ್ತಿಯು ತಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದೆ ಎಂದರು. ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಸಮಿತಿ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್, ಆಯ್ಕೆ ಸಮಿತಿ ಮುಖ್ಯಸ್ಥ ಕವಿ ಟೈಟಸ್ ನೊರೊನ್ಹಾ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ರಮೇಶ್ ನಾಯಕ್ ಮೈರಾ, ಎಂಡಿಎಸ್ ಚ್ಯಾರಿಟೀಸ್‌ನ ಪ್ರೊ| ಲೈನಲ್ ಅರಾನ್ಹಾ, ಓಸ್ವಲ್ಡ್ ರೊಡ್ರಿಗಸ್, ಕವಿ ಕಿಶೂ ಬಾರ್ಕೂರು, ಚಿತ್ರ ನಿರ್ದೇಶಕ ಸ್ಟ್ಯಾನಿ ಬೇಳಾ, ಕೆನರಾ ಸಂಪರ್ಕ ಕೇಂದ್ರದ ಫಾ| ಅನಿಲ್ ಐವನ್ ಫೆರ್ನಾಂಡಿಸ್ ಹಾಗೂ ಗ್ಲ್ಯಾನಿಶ್ ಅವರ ಪಿಎಚ್‌ಡಿ ಮಾರ್ಗದರ್ಶಕರಾದ ಡಾ| ಸಂತೋಷ್ ಎಲ್. ಗಾಂವ್ಕರ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ