image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಜನೆಯಿಂದ ಮುಂದಿನ ಪೀಳಿಗೆಗೆ ಸಂಸ್ಕಾರ: ಡಾ. ಡಿ. ವೀರೇಂದ್ರ ಹೆಗ್ಗಡೆ

ಭಜನೆಯಿಂದ ಮುಂದಿನ ಪೀಳಿಗೆಗೆ ಸಂಸ್ಕಾರ: ಡಾ. ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಭಜನೆಯ ಮೂಲಕ ಮನಸ್ಸುಗಳು ಒಂದಾಗುವುದರೊಂದಿಗೆ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜಿಸಲಾಗಿದ್ದ ೨೮ನೇ ವರ್ಷದ ಭಜನಾ ಕಮ್ಮಟದ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೀವನದಲ್ಲಿ ಭಜನೆಗೆ ಬಹುದೊಡ್ಡ ಸ್ಥಾನವಿದ್ದು, ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಪ್ರಶಸ್ತಿ ಎನ್ನುವುದು ಕೇವಲ ಸನ್ಮಾನವಲ್ಲ, ಅದು ಸಮಾಜ ನೀಡುವ ಗೌರವ ಹಾಗೂ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡುವ ಜವಾಬ್ದಾರಿಯನ್ನು ನೆನಪಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಆಯ್ದ ೨೪ ಭಜನಾ ಮಂಡಳಿಗಳಿಗೆ ಸಾಧನಾ ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಮಾಣಿಲ ಶ್ರೀಗಳು, ಕಮ್ಮಟದಲ್ಲಿ ಮಕ್ಕಳು, ಯುವಕರು ಮತ್ತು ಹಿರಿಯರು ಒಂದಾಗಿ ಕುಳಿತು ದೇವರ ನಾಮಸ್ಮರಣೆ ಮಾಡುತ್ತಿರುವುದು ವಿಶೇಷ ಎಂದರು. ಭಗವಂತನ ಮುಂದೆ ಎಲ್ಲರೂ ಭಕ್ತರೇ ಹೊರತು ಯಾರೂ ಚಿಕ್ಕವರಲ್ಲ, ದೊಡ್ಡವರಲ್ಲ ಎಂದು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಸೊರಬ ತಾಲೂಕಿನ ೨೭ನೇ ವರ್ಷದ ಭಜನಾ ಕಮ್ಮಟದ ಶಿಬಿರಾರ್ಥಿಗಳು ಪೂಜ್ಯ ಖಾವಂದರನ್ನು ವಿಶೇಷವಾಗಿ ಗೌರವಿಸಿದರು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ಈ ಸಮಾರಂಭದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಖ್ಯಾತ ಗಾಯಕ ಶಂಕರ ಶ್ಯಾನಭಾಗ್ ಬೆಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಬಸ್ರೂರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ಸ್ವಾಗತಿಸಿದರು, ಕೆ.ವಿ. ಬಲ್ಲಾಳ್ ಧನ್ಯವಾದ ಸಮರ್ಪಿಸಿದರು, ವಿಕಾಸ್ ಆರಿಗ ಕಾರ್ಯಕ್ರಮ ನಿರೂಪಿಸಿದರು ಹಾಗೂ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸಮಾರೋಪ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ