image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ 28 ನೇ ವರ್ಷದ ಭಜನಾ ಕಮ್ಮಟ ಸಮಾರೋಪ

ಧರ್ಮಸ್ಥಳದಲ್ಲಿ 28 ನೇ ವರ್ಷದ ಭಜನಾ ಕಮ್ಮಟ ಸಮಾರೋಪ

ಉಜಿರೆ: ಭಜನೆಯು ಭಗವಂತನ ಅನುಗ್ರಹ ಪಡೆಯಲು ಅತ್ಯಂತ ಸರಳ ಮಾರ್ಗವಾಗಿದ್ದು, ಇದರಿಂದ ಸಾತ್ವಿಕ ಶಕ್ತಿ ಜಾಗೃತವಾಗಿ ನೈತಿಕ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು. ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿದ 28 ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ನಾಡು-ವಿದೇಶಗಳಲ್ಲಿ ಅನೇಕ ಸಾಧು-ಸಂತರು ಹಾಗೂ ಭಕ್ತರು ಶ್ರದ್ಧಾ-ಭಕ್ತಿಯ ಭಜನೆಯ ಮೂಲಕ ದೈವಕೃಪೆಗೆ ಪಾತ್ರರಾಗಿದ್ದಾರೆ ಎಂದ ಸ್ವಾಮೀಜಿಯವರು, ಹಲವು ಜನಮಂಗಳ ಕಾರ್ಯಗಳನ್ನು ನಡೆಸುತ್ತಿರುವ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು 'ರಾಜರ್ಷಿ' ಎಂದು ಶ್ಲಾಘಿಸಿದರು. ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕೆ ಕೃಷಿ ಹಾಗೂ ಋಷಿ ಸಂಸ್ಕೃತಿ ಪ್ರಮುಖ ತಳಹದಿಯಾಗಿದ್ದು, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಸಲ್ಲದು ಎಂದರು.

ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಶಿಬಿರಾರ್ಥಿಗಳು ಕಮ್ಮಟದಲ್ಲಿ ಪಡೆದ ತರಬೇತಿ ಮತ್ತು ಅನುಭವವನ್ನು ಸದುಪಯೋಗಪಡಿಸಿಕೊಂಡು ಆಯಾ ಊರಿನ ಪ್ರಗತಿಯ ರೂವಾರಿಗಳಾಗಬೇಕು ಎಂದು ಕರೆ ನೀಡಿದರು. ಈ ಬಾರಿ ಒಂದು ವಾರ ನಡೆದ ಕಮ್ಮಟದಲ್ಲಿ ೧೦೭ ಪುರುಷರು ಹಾಗೂ ೧೦೫ ಮಹಿಳೆಯರು ಸೇರಿದಂತೆ ಒಟ್ಟು ೨೧೨ ಶಿಬಿರಾರ್ಥಿಗಳು ತರಬೇತಿ ಪಡೆದಿದ್ದಾರೆ. ಕಮ್ಮಟದ ವಿಶೇಷ ಅಂಗವಾಗಿ ೪೦೦ ಭಜನಾ ತಂಡಗಳ ಆರು ಸಾವಿರ ಭಜನಾಪಟುಗಳಿಂದ ಬೃಹತ್ ಶೋಭಾಯಾತ್ರೆ ಹಾಗೂ ಶಿಬಿರಾರ್ಥಿಗಳಿಂದ ಆಕರ್ಷಕ ಸಾಮೂಹಿಕ ನೃತ್ಯ ಭಜನೆ ಜರುಗಿತು.

ಕಾರ್ಯಕ್ರಮದಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ಸಮರ್ಪಿಸಿದರು, ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ರತ್ನವರ್ಮ ಜೈನ್ ಧನ್ಯವಾದ ಸಲ್ಲಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ