ಸುಬ್ರಹ್ಮಣ್ಯ : ದಸರಾ ರಜೆ ಆರಂಭವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನೆ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಶನಿವಾರ ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಹರಿದುಬಂದಿದ್ದಾರೆ. ಶುಕ್ರವಾರ ಸಂಜೆಯಿಂದಲೇ ಭಕ್ತರ ಆಗಮನ ಹೆಚ್ಚಾಗಿದ್ದರಿಂದ ದೇವಸ್ಥಾನದ ವಸತಿ ಗೃಹಗಳು ಹಾಗೂ ಖಾಸಗಿ ಲಾಡ್ಜ್‌ಗಳು ಸಂಪೂರ್ಣ ಭರ್ತಿಯಾಗಿದ್ದವು.
ಶನಿವಾರ ಬೆಳಿಗ್ಗೆ ಪವಿತ್ರ ಕುಮಾರಧಾರ ನದಿಯಲ್ಲಿ ತೀರ್ಥಸ್ನಾನ ಮಾಡಿದ ಭಕ್ತರು ರಥಬೀದಿಯ ಮೂಲಕ ದೇವಸ್ಥಾನ ಪ್ರವೇಶಿಸಿ ದೇವರ ದರ್ಶನ ಪಡೆದರು. ದಿನವಿಡೀ ನಡೆದ ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಪೂಜೆಗಳಲ್ಲಿ ಭಾರಿ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ದೇವಸ್ಥಾನದ ವತಿಯಿಂದ ದರ್ಶನ, ತೀರ್ಥಪ್ರಸಾದ ಹಾಗೂ ಮಧ್ಯಾಹ್ನದ ಮಹಾ ಅನ್ನಸಂತರ್ಪಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರ ಹರಿವನ್ನು ಸುಗಮಗೊಳಿಸಲು ಗೃಹರಕ್ಷಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ದೇವಳದ ಸಿಬ್ಬಂದಿ ಶ್ರಮಿಸಿದ್ದು, ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ಭಕ್ತರ ಅನುಕೂಲಕ್ಕಾಗಿ ಶ್ರೀಕ್ಷೇತ್ರದಲ್ಲಿ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಿ ವಿವಿಧ ಸೇವೆಗಳ ರಶೀದಿ ಪಡೆಯುವ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದಲ್ಲದೆ, ಖಾಯಂ ಸೇವೆ ಹಾಗೂ ಅನ್ನದಾನ ರಶೀದಿಗಳಿಗಾಗಿ ದೇವಳದ ಗೋಪುರದ ಬಲಭಾಗದಲ್ಲಿ ವಿಶಾಲವಾದ ಪ್ರತ್ಯೇಕ ವಿಶೇಷ ಕೌಂಟರ್‌ಗಳನ್ನು ಸಿದ್ಧಪಡಿಸಲಾಗಿದ್ದು, ಭಕ್ತರು ಈ ನೂತನ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳುವಂತೆ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.