ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಸಾರಥ್ಯದಲ್ಲಿ, ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ಪ್ರವರ್ತಕತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 08, 2026 ರ ಆದಿತ್ಯವಾರದಂದು 'ಅಶೋಕ ಜನ-ಮನ-2026' ವಸ್ತ್ರ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಈ ಬೃಹತ್ ಕಾರ್ಯಕ್ರಮದ ವಿಶೇಷ ಅಂಗವಾಗಿ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಹಾಗೂ ಮೌನವಾಗಿ ಶ್ರಮಿಸುತ್ತಿರುವ 10 ಮಂದಿ ಬಡ ಸಾಧಕರನ್ನು ಗುರುತಿಸಿ ವೇದಿಕೆಯಲ್ಲಿ ಸನ್ಮಾನಿಸಲು ಉದ್ದೇಶಿಸಲಾಗಿದೆ. ಸಮಾಜದ ಮುನ್ನೆಲೆಗೆ ಬಾರದೆ, ತಮ್ಮದೇ ಆದ ಕಷ್ಟಗಳ ನಡುವೆಯೂ ಮಾದರಿ ಜೀವನ ನಡೆಸುತ್ತಿರುವ ಕಟ್ಟಕಡೆಯ ವ್ಯಕ್ತಿಗಳನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗುತ್ತದೆ.
ಈ ಸನ್ಮಾನಕ್ಕಾಗಿ ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರು, ಬೀಡಿ ಕಟ್ಟಿ ಅಥವಾ ಹೈನುಗಾರಿಕೆ ಮೂಲಕವೇ ಮನೆ ನಡೆಸುತ್ತಾ ಸ್ವಾವಲಂಬನೆ ಸಾಧಿಸಿದವರು, ಅನಾರೋಗ್ಯ ಪೀಡಿತರಾದ ಹೆತ್ತವರನ್ನು ಅಥವಾ ಹಲವಾರು ವರ್ಷಗಳಿಂದ ಮಲಗಿದ್ದಲ್ಲೇ ಆರೈಕೆ ಮಾಡುತ್ತಿರುವ ಮಕ್ಕಳು ಹಾಗೂ ಪೋಷಕರು ಅರ್ಹರಾಗಿದ್ದಾರೆ. ಇದರೊಂದಿಗೆ ಬಡತನದ ಬೇಗೆಯಲ್ಲೂ ಬುಟ್ಟಿ ಹೆಣೆದು ಜೀವನ ನಡೆಸುತ್ತಿರುವ ಕೊರಗ ಸಮುದಾಯದ ಸಾಧಕರು, ಕುಂಬಾರರು, ನಿಸ್ವಾರ್ಥ ಸೇವಾ ಮನೋಭಾವದ ಆಟೋ ಡ್ರೈವರುಗಳು, ಸಮಾಜಕ್ಕೆ ಉಚಿತ ಸೇವೆ ನೀಡುತ್ತಿರುವ ನಾಟಿ ವೈದ್ಯರು ಹಾಗೂ ವಿಶಿಷ್ಟ ಸಾಧನೆ ಮಾಡಿರುವ ಹಿರಿಯ ಕೂಲಿ ಕಾರ್ಮಿಕರನ್ನು ಈ ಸನ್ಮಾನಕ್ಕೆ ಪರಿಗಣಿಸಲಾಗುತ್ತದೆ.
ನಿಮ್ಮ ಗ್ರಾಮ ಅಥವಾ ಸುತ್ತಮುತ್ತ ಇಂತಹ ಅರ್ಹ ಸಾಧಕರ ಮಾಹಿತಿ ಇದ್ದಲ್ಲಿ, ಅಂತಹವರ ಸಂಕ್ಷಿಪ್ತ ಮಾಹಿತಿಯೊಂದಿಗೆ ದಿನಾಂಕ 31.10.2026 ರೊಳಗೆ ಸನ್ಮಾನ ಸಮಿತಿಯ ಸಂಚಾಲಕರನ್ನು ದೂರವಾಣಿ ಮೂಲಕ ಸಂಪರ್ಕಿಸಬೇಕಾಗಿ ಕೋರಲಾಗಿದೆ. ಮಾಹಿತಿ ನೀಡಲು ಹಾಗೂ ಹೆಚ್ಚಿನ ವಿವರಗಳಿಗಾಗಿ 8105672143, 9008149987, 8296915918 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷರಾದ ಸುದೇಶ್ ಆರ್. ಶೆಟ್ಟಿ ಶಾಂತಿನಗರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.