image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಜನೆಯಿಂದ ಆತ್ಮಶುದ್ಧಿ, ಲೋಕಕಲ್ಯಾಣ: ಡಾ. ಹೇಮಾವತಿ ಹೆಗ್ಗಡೆ

ಭಜನೆಯಿಂದ ಆತ್ಮಶುದ್ಧಿ, ಲೋಕಕಲ್ಯಾಣ: ಡಾ. ಹೇಮಾವತಿ ಹೆಗ್ಗಡೆ

ಧರ್ಮಸ್ಥಳ: ಭಜನೆಯು ಕೇವಲ ಹಾಡು, ರಾಗ ಮತ್ತು ತಾಳದ ಅಭ್ಯಾಸವಲ್ಲ; ಅದು ಮನಸ್ಸನ್ನು ಶುದ್ಧಗೊಳಿಸಿ ಆತ್ಮಕಲ್ಯಾಣದೊಂದಿಗೆ ಸಮಾಜ ಹಾಗೂ ಲೋಕಕಲ್ಯಾಣಕ್ಕೆ ದಾರಿತೋರುವ ಆಧ್ಯಾತ್ಮಿಕ ಸಾಧನೆಯಾಗಿದೆ ಎಂದು ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜಿಸಲಾಗಿದ್ದ ಭಜನಾ ಕಮ್ಮಟದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಿಬಿರಾರ್ಥಿಗಳು ಬಂದ ಉದ್ದೇಶವನ್ನು ನೆನಪಿನಲ್ಲಿಟ್ಟುಕೊಂಡು ಆಲಸ್ಯಕ್ಕೆ ಅವಕಾಶ ನೀಡದೆ, ಶ್ರದ್ಧೆ ಮತ್ತು ಭಕ್ತಿಯಿಂದ ಭಜನೆ ಕಲಿಯಬೇಕು ಎಂದರು.

ದೋಣಿಯಲ್ಲಿ ಸಣ್ಣ ರಂಧ್ರ ಉಂಟಾದರೂ ನೀರು ತುಂಬಿ ಮುಳುಗುವಂತೆ, ಕಾಮ, ಕ್ರೋಧ, ಲೋಭ, ಮೋಹ ಮೊದಲಾದ ದುರ್ಗುಣಗಳು ಇಡೀ ಜೀವನವನ್ನು ಹಾಳುಮಾಡುತ್ತವೆ. ನಿತ್ಯ ಭಜನೆ ಮತ್ತು ಭಗವದ್ಚಿಂತನೆಯಿಂದ ಮನಸ್ಸನ್ನು ಕೆಟ್ಟ ಆಲೋಚನೆಗಳಿಂದ ದೂರವಿಡಬಹುದು. ಧರ್ಮವು ಜೀವನದ ಬೇರಿದ್ದಂತೆ; ಭಜನಾ ಕಮ್ಮಟಗಳು ಸಮಾಜದ ಬೇರಿಗೆ ನೀರೆರೆಯುವ ಕಾರ್ಯ ಮಾಡುತ್ತವೆ. ನಾವು ಮಾಡುವ ಒಳಿತು-ಕೆಡುಕುಗಳ ಕರ್ಮಫಲದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಭಜನೆ ನಿರಂತರವಾಗಿ ನೆನಪಿಸುತ್ತದೆ ಎಂದು ತಿಳಿಸಿದರು.

ವೃದ್ಧಾಪ್ಯ, ಕಾಯಿಲೆ ಮತ್ತು ಮರಣ ಶಾಶ್ವತ ಸತ್ಯಗಳಾಗಿದ್ದು, ಜೀವನದ ಅನಿತ್ಯತೆಯನ್ನು ಅರಿತು ಆಧ್ಯಾತ್ಮಿಕ ಸಾಧನೆಯತ್ತ ಮುಖಮಾಡಬೇಕು. ವಯಸ್ಸಾದ ಮೇಲೆ ಭಜನೆ, ಧ್ಯಾನ ಮಾಡೋಣ ಎಂದು ಮುಂದೂಡುವುದು ಸರಿಯಲ್ಲ. ಪ್ರಯಾಣಕ್ಕೆ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವಂತೆ, ಜೀವನದ ಪ್ರಯಾಣಕ್ಕೂ ಸತ್ಕಾರ್ಯಗಳ ಮೂಲಕ ಸಿದ್ಧತೆ ಮಾಡಿಕೊಳ್ಳಬೇಕು. ಕನಕದಾಸರು ಮತ್ತು ಪುರಂದರದಾಸರು ಯಾವುದೇ ಸಂಕೋಚವಿಲ್ಲದೆ ಭಕ್ತಿಯನ್ನು ವ್ಯಕ್ತಪಡಿಸಿ ಲೋಕಕಲ್ಯಾಣಕ್ಕೆ ಕಾರಣರಾದರು. ಹಿಂದಿನವರು ಸಂಸಾರದ ಕೆಲಸಗಳ ನಡುವೆಯೂ ಭಗವಂತನ ಸ್ಮರಣೆ ಮಾಡುತ್ತಿದ್ದಂತೆ, ನಿರಂತರ ಭಜನೆಯಿಂದ ಮನಸ್ಸಿನ ಅಜ್ಞಾನ ಮತ್ತು ಮಲಿನತೆ ದೂರವಾಗುತ್ತದೆ ಎಂದು ವಿವರಿಸಿದರು.

ದೇಹಕ್ಕೆ ಸೇವಿಸುವ ಅನ್ನದಂತೆಯೇ ಮನಸ್ಸು ಮತ್ತು ಬುದ್ಧಿಯ ಮೂಲಕ ಒಳಗೆ ಪ್ರವೇಶಿಸುವ ವಿಚಾರಗಳೂ ಆಹಾರವೇ ಎಂಬ ಶಂಕರಾಚಾರ್ಯರ ತತ್ತ್ವವನ್ನು ಉಲ್ಲೇಖಿಸಿದ ಅವರು, ಮಾಧ್ಯಮಗಳ ಮೂಲಕ ನಮಗರಿವಿಲ್ಲದೇ ಮನಸ್ಸಿಗೆ ಸೇರುತ್ತಿರುವ ವಿಚಾರಗಳ ಕುರಿತು ಆತ್ಮಾವಲೋಕನ ಅಗತ್ಯ ಎಂದರು. ನೀರು ಶುದ್ಧವಾಗಿದ್ದಾಗ ಸೂರ್ಯನ ಪ್ರತಿಬಿಂಬ ಸ್ಪಷ್ಟವಾಗಿ ಕಾಣುವಂತೆ, ಮನಸ್ಸು ಶುದ್ಧವಾಗಿದ್ದಾಗ ಮಾತ್ರ ದೇವರ ಸಾನ್ನಿಧ್ಯ ಅನುಭವಿಸಲು ಸಾಧ್ಯ ಎಂದು ಕರೆ ನೀಡಿದರು. ಭಜನಾ ಕಮ್ಮಟದ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ವಿಕಾಸ್ ಆರಿಗ ಧನ್ಯವಾದ ಸಲ್ಲಿಸಿದರು.

ಇದೇ ಸಂಧರ್ಭ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನದ ಶಿಬಿರವು ಯಶಸ್ವಿಯಾಗಿ ನೆರವೇರಿತು. ಅಕ್ಟೋಬರ್ 02, ಶುಕ್ರವಾರದಂದು ನಡೆದ ಈ ತರಬೇತಿ ಶಿಬಿರದಲ್ಲಿ ಮೈಸೂರಿನ ಖ್ಯಾತ ಗಾಯಕ ಉಪ್ಪುಂದ ರಾಜೇಶ್ ಪಡಿಯಾರ್ ಅವರು ಆಗಮಿಸಿ, ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೆ ಭಜನಾ ಗಾಯನದ ಕುರಿತು ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡಿದರು.

​ತರಬೇತಿಯ ಅವಧಿಯಲ್ಲಿ ದಾಸ ಸಾಹಿತ್ಯದ ಪ್ರಸಿದ್ಧ ಕೀರ್ತನೆಗಳಾದ 'ಇಟ್ಹಾಂಗೆ ಇರುವೆನೋ ಹರಿಯೇ', 'ಏಸು ಕಾಯಂಗಳ ಕಳೆದು' ಸೇರಿದಂತೆ ವಿವಿಧ ಪ್ರಮುಖ ಭಜನಾ ಕೀರ್ತನೆಗಳನ್ನು ತರಬೇತುದಾರರು ಶಿಬಿರಾರ್ಥಿಗಳಿಂದ ಅಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಜೈನ್ ಹಾಗೂ ಭಜನಾ ಕಮ್ಮಟ ಪರಿಷತ್‌ನ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್ ಅವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ