ಮೂಡುಬಿದಿರೆಯ ಆಳ್ವಾಸ್ ಕುವೆಂಪು ಸಭಾಂಗಣದಲ್ಲಿ ನಡೆದ ‘ಹಸಿರು ಸಂವಾದ – ಸ್ವಚ್ಛ ಗ್ರಾಮಕ್ಕಾಗಿ ಕಾರ್ಯಯೋಜನೆ’ ಅವಲೋಕನ ಹಾಗೂ ಮುಂದಿನ ಕಾರ್ಯಯೋಜನೆ ರೂಪಿಸುವ ಸಭೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿದರು. ಸ್ವಚ್ಛತೆಯು ಕೇವಲ ತ್ಯಾಜ್ಯ ಸಂಗ್ರಹಣೆ ಅಥವಾ ವಿಲೇವಾರಿ ಮಾಡುವ ಕಾರ್ಯವಾಗದೇ, ತ್ಯಾಜ್ಯ ಉತ್ಪಾದನೆಯನ್ನೇ ಕಡಿಮೆ ಮಾಡುವ ಜೀವನಶೈಲಿಯಾಗಿ ರೂಪುಗೊಳ್ಳಬೇಕು ಎಂದು ಅವರು ಹೇಳಿದರು. ಪ್ರತಿಯೊಂದು ಗ್ರಾಮದಲ್ಲೂ ಜನರನ್ನು ಜಾಗೃತಗೊಳಿಸಿ, ಸ್ಥಳೀಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ಸ್ವಚ್ಛ ಗ್ರಾಮಗಳ ನಿರ್ಮಾಣ ಸಾಧ್ಯ ಎಂದರು. ‘ಸ್ವಚ್ಛ ಗ್ರಾಮ’ ಎಂಬುದು ಪ್ರಶಸ್ತಿಗಾಗಿ ನಡೆಸುವ ಚಟುವಟಿಕೆಯಾಗದೆ ಗ್ರಾಮಸ್ಥರ ದೈನಂದಿನ ಜೀವನದ ಭಾಗವಾಗಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳು ಹಾಗೂ ಸ್ಥಳೀಯರು ಕೈಗೊಂಡ ಪರಿಸರ ಮಾದರಿಗಳನ್ನು ಪ್ರಸ್ತುತಪಡಿಸಲಾಯಿತು. ಕಾರ್ಕಳದ ಜ್ಯೋತಿ ಅವರ ‘ವೇಸ್ಟ್ ಟು ಆರ್ಟ್’ ಯೋಜನೆ, ಚೇತನ ವಿಶೇಷ ಶಾಲೆಯ ‘ಹಸಿರು ಕ್ರಾಂತಿ’ ಅಡಿಯ ಪರಿಸರ ಸ್ನೇಹಿ ಉತ್ಪನ್ನಗಳು, ಸಾಣೂರಿನ ಶಂಕರ್ ಕುಲಾಲ್ ಅವರ ಮಣ್ಣಿನ ಪಾತ್ರೆಗಳ ಬಳಕೆ ಜಾಗೃತಿ, ಹಾಗೂ ಮೂಡುಬಿದಿರೆಯ ಸಂಧ್ಯಾ ಅಳಿಕೆ ಅವರ ಏಕಬಳಕೆ ವಸ್ತುಗಳಿಗೆ ಪರ್ಯಾಯವಾಗಿ ರೂಪುಗೊಂಡ ‘ಕಲ್ಪವೃಕ್ಷ ಕಟ್ಲರಿ ಬ್ಯಾಂಕ್’ ನಂತಹ ಯಶಸ್ವಿ ಪ್ರಯತ್ನಗಳನ್ನು ವಿವರಿಸಲಾಯಿತು. ಅಲ್ಲದೆ ಡಾ. ಪ್ರಸನ್ನ ಕಾಕುಂಜೆ ಅವರು ಮರುಬಳಕೆ ಹಾಗೂ ಜೈವಿಕವಾಗಿ ವಿಘಟನೆಯಾಗುವ ವಸ್ತುಗಳ ಬಳಕೆಯ ಮಹತ್ವ ತಿಳಿಸಿದರೆ, ಬೆಂಗಳೂರಿನ ‘ಕುಸುರಿ ಮನೆ’ಯ ಸುಜಾತಾ ಅವರು ತ್ಯಾಜ್ಯ ಬಟ್ಟೆಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವ ಮೂಲಕ ಮಹಿಳಾ ಶಕ್ತಿಯನ್ನು ಪರಿಸರ ಸಂರಕ್ಷಣೆಗೆ ಜೋಡಿಸುವ ಅಗತ್ಯವನ್ನು ಪ್ರತಿಪಾದಿಸಿದರು.
ಹಸಿರು ಸಂವಾದದ ಮುಂದಿನ ಹಂತದಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಸಮೀಕ್ಷೆ ನಡೆಸಿ, ತ್ಯಾಜ್ಯ ನಿರ್ವಹಣೆ, ನೀರು ಹಾಗೂ ಪ್ಲಾಸ್ಟಿಕ್ ಬಳಕೆಯ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಪರ್ಯಾಯ ಪರಿಹಾರ ರೂಪಿಸಲು ನಿರ್ಧರಿಸಲಾಯಿತು. ಇದೇ ಸಂದರ್ಭದಲ್ಲಿ ಹಸಿರು ಸಂವಾದದ ವೆಬ್‌ಸೈಟ್ ಅನಾವರಣಗೊಳಿಸಲಾಯಿತು ಹಾಗೂ ಯುವಜನರಿಗಾಗಿ ಐಡಿಯಾಥಾನ್ ಆಯೋಜಿಸಲು ತೀರ್ಮಾನಿಸಲಾಯಿತು. ಹಸಿರು ಸಂವಾದ ತಂಡದ ಡಾ. ಕುರಿಯನ್ ಮಾತನಾಡಿ, ಅಕ್ಟೋಬರ್ 15ರ ಒಳಗೆ ಗ್ರಾಮ ಮಟ್ಟದ ಸಮೀಕ್ಷೆ, ಅಕ್ಟೋಬರ್ 30ರ ಒಳಗೆ ಐಡಿಯಾಥಾನ್ ಮತ್ತು ನವೆಂಬರ್ 30ರ ಒಳಗೆ ಜಾಗೃತಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾರಂಭ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ವೆಂಕಟೇಶ್ ಸಂಗನಾಳ್, ಮೂಡುಬಿದಿರೆ ಪುರಸಭೆಯ ಪರಿಸರ ಅಧಿಕಾರಿ ಶಿಲ್ಪಾ, ರಾಜೇಂದ್ರ ಕಾರ್ಕಳ, ಕೇಶವ ಹಾಗೂ ವಿವಿಧ ಗ್ರಾಮಗಳ ಪ್ರಮುಖರು ಭಾಗವಹಿಸಿದ್ದರು.