image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂತ ಅಲೋಶಿಯಸ್ ಐ.ಟಿ.ಐ. ಕಾಲೇಜಿನಲ್ಲಿ ಪ್ಲಾಸ್ಟಿಕ್ ಮುಕ್ತ ಗಾಂಧಿ ಜಯಂತಿ: ಬಟ್ಟೆ ಚೀಲ ವಿತರಣಾ ವಿಶೇಷ ಅಭಿಯಾನಕ್ಕೆ ಚಾಲನೆ

ಸಂತ ಅಲೋಶಿಯಸ್ ಐ.ಟಿ.ಐ. ಕಾಲೇಜಿನಲ್ಲಿ ಪ್ಲಾಸ್ಟಿಕ್ ಮುಕ್ತ ಗಾಂಧಿ ಜಯಂತಿ: ಬಟ್ಟೆ ಚೀಲ ವಿತರಣಾ ವಿಶೇಷ ಅಭಿಯಾನಕ್ಕೆ ಚಾಲನೆ

ಮಂಗಳೂರು: "ಸ್ವಚ್ಛ ಮಂಗಳೂರು ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರ"ದ ಮಹತ್ವಾಕಾಂಕ್ಷೆಯ ಧ್ಯೇಯದೊಂದಿಗೆ, ನಗರದ ಸಂತ ಅಲೋಶಿಯಸ್ ಐ.ಟಿ.ಐ. ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗಾಂಧಿ ಜಯಂತಿಯನ್ನು ಅತ್ಯಂತ ಅರ್ಥಪೂರ್ಣ ಹಾಗೂ ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸದುದ್ದೇಶದಿಂದ ಸಾರ್ವಜನಿಕರಿಗೆ ಬಟ್ಟೆ ಚೀಲಗಳನ್ನು ವಿತರಿಸುವ ಬೃಹತ್ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಹಸಿರು ದಳ, ಸೂಜಿ ಮಲ್ಲಿಗೆ ಸ್ವಸಹಾಯ ಗುಂಪು, ಲಿಯನ್ಸ್ ಕ್ಲಬ್ ಮಂಗಳೂರು, ಲಿಯೊ ಕ್ಲಬ್ ಸೈಂಟ್ ಅಲೋಶಿಯಸ್ ಐಟಿಐ ಮತ್ತು ಲಿಯೊ ಕ್ಲಬ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ "ಸ್ವಚ್ಛ ಮಂಗಳೂರಿಗಾಗಿ ನಮ್ಮ ಕೌಶಲ್ಯ" ಎಂಬ ಧ್ಯೇಯವಾಕ್ಯದಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ವಿಶೇಷತೆಯೆಂದರೆ, ಐ.ಟಿ.ಐ. ವಿದ್ಯಾರ್ಥಿಗಳು ಸಾರ್ವಜನಿಕರಿಂದ ಹಾಗೂ ವಿವಿಧ ಮೂಲಗಳಿಂದ ಸಂಗ್ರಹಿಸಿದ ಹಳೆಯ ಬಟ್ಟೆಗಳನ್ನು ಬಳಸಿ ಸ್ವತಃ ತಮ್ಮ ಕೈಯಿಂದ ಸುಮಾರು 1,000 ಆಕರ್ಷಕ ಬಟ್ಟೆ ಚೀಲಗಳನ್ನು ತಯಾರಿಸಿದ್ದರು. ಪ್ಲಾಸ್ಟಿಕ್ ಮಾಲಿನ್ಯಕ್ಕೆ ಬಲವಾದ ಪರ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಈ ವಿನೂತನ ಹೆಜ್ಜೆ ಇಡಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಸಂತ ಅಲೋಶಿಯಸ್ ಐ.ಟಿ.ಐ. ಆವರಣದಿಂದ ಪ್ರಾರಂಭವಾದ ಬೃಹತ್ ಕಾಲ್ನಡಿಗೆ ಜಾಥಾವು ಬಂಟ್ಸ್ ಹಾಸ್ಟೆಲ್ ಮೂಲಕ ಮಲ್ಲಿಕಟ್ಟೆಯವರೆಗೆ ಸಾಗಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ದಾರಿಯುದ್ದಕ್ಕೂ ಜನಸಾಮಾನ್ಯರ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲಗಳನ್ನು ಸೌಜನ್ಯದಿಂದ ಪಡೆದುಕೊಂಡು, ಬದಲಿಗೆ ಪರಿಸರ ಸ್ನೇಹಿಯಾದ ಬಟ್ಟೆ ಚೀಲಗಳನ್ನು ಉಚಿತವಾಗಿ ವಿತರಿಸಿದರು. ಜೊತೆಗೆ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ. ಎನ್. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಭಿಯಾನಕ್ಕೆ ಶುಭ ಹಾರೈಸಿದರು.

ಸಂತ ಅಲೋಶಿಯಸ್ ಐ.ಟಿ.ಐ. ಮಂಗಳೂರು ಇದರ ನಿರ್ದೇಶಕ ವಂ. ಜಾನ್ ಡಿಸೋಜ ಎಸ್.ಜೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಸಿರು ದಳದ ಸಂಚಾಲಕರಾದ ನಾಗರಾಜ್ ಬಜಾಲ್, ಮಂಗಳೂರು ಲಯನ್ಸ್ ಕ್ಲಬ್‌ ಅಧ್ಯಕ್ಷೆ ಹೇಮ ರಾವ್, ಐ.ಟಿ.ಐ. ಪ್ರಾಂಶುಪಾಲರಾದ ರೋಶನ್ ಡಿಸೋಜ, ಉಪ ಪ್ರಾಂಶುಪಾಲ ಆಲ್ವಿನ್ ಮಿನೇಜಸ್, ಪ್ರಮುಖರಾದ ನೋಯೆಲ್ ಲೋಬೊ, ವಿಲ್ಸನ್ ಎನ್., ತರಬೇತಿ ಅಧಿಕಾರಿಗಳು ಹಾಗೂ ಸೈಂಟ್ ಅಲೋಶಿಯಸ್ ಐಟಿಐ ಲಿಯೋ ಕ್ಲಬ್ ಅಧ್ಯಕ್ಷ ನಾಗರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ನೂರಾರು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಈ ವಿಶೇಷ ಅಭಿಯಾನವು ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ, ಯುವಜನರಲ್ಲಿ ಕೌಶಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಯಿತು.

Category
ಕರಾವಳಿ ತರಂಗಿಣಿ