image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಷ್ಯಾದ ಅಭಿವೃದ್ಧಿ ಮಾದರಿ ಅನುಕರಣೀಯ: ವಿವೇಕ್ ಆಳ್ವ

ರಷ್ಯಾದ ಅಭಿವೃದ್ಧಿ ಮಾದರಿ ಅನುಕರಣೀಯ: ವಿವೇಕ್ ಆಳ್ವ

ಮೂಡುಬಿದಿರೆ: ಆಧುನಿಕ ನಗರಾಭಿವೃದ್ಧಿಯೊಂದಿಗೆ ಪ್ರಕೃತಿ ಸಂರಕ್ಷಣೆ, ಐತಿಹಾಸಿಕ ಪರಂಪರೆ, ಸಾರ್ವಜನಿಕ ಸಾರಿಗೆ ಹಾಗೂ ದೇಶೀಯ ಉತ್ಪಾದನೆಗೆ ಸಮಾನ ಆದ್ಯತೆ ನೀಡಿರುವ ರಷ್ಯಾದ ಅಭಿವೃದ್ಧಿ ದೃಷ್ಟಿಕೋನವು ವಿಶಿಷ್ಟವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದ್ದಾರೆ. ಆಳ್ವಾಸ್‌ನ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತ್ತೀಚಿನ ರಷ್ಯಾ ಪ್ರವಾಸದ ಅನುಭವಗಳನ್ನು ಹಂಚಿಕೊಂಡ ಅವರು, ದೇಶದ ಅಭಿವೃದ್ಧಿಯನ್ನು ಕೇವಲ ಎತ್ತರದ ಕಟ್ಟಡಗಳು ಅಥವಾ ಮೂಲಸೌಕರ್ಯಗಳಿಂದ ಅಳೆಯಲಾಗದು; ಪ್ರಕೃತಿಯೊಂದಿಗೆ ಬದುಕುವ ವಿಧಾನ ಮತ್ತು ಸಾರ್ವಜನಿಕ ಶಿಸ್ತು ಕೂಡ ಅಭಿವೃದ್ಧಿಯ ಮುಖ್ಯ ಮಾನದಂಡಗಳಾಗಬೇಕು ಎಂದರು.

ರಷ್ಯಾದ ನಗರ ಯೋಜನೆಯಲ್ಲಿ ಪ್ರಕೃತಿಗೆ ಪ್ರಮುಖ ಸ್ಥಾನ ನೀಡಲಾಗಿದ್ದು, ವಿಶಾಲ ಹಸಿರು ಪ್ರದೇಶಗಳು ಹಾಗೂ ಪಾದಚಾರಿ ಪಥಗಳನ್ನು ನಿರ್ಮಿಸಲಾಗಿದೆ. ಗಣಿಗಾರಿಕೆ ಸ್ಥಗಿತಗೊಂಡ ಮಾರ್ಬಲ್ ಗಣಿಯೊಂದನ್ನು ಪರಿಸರ ಪ್ರವಾಸೋದ್ಯಮ ತಾಣವಾಗಿ ಮಾರ್ಪಡಿಸಿರುವುದು ಅತ್ಯಂತ ಗಮನಾರ್ಹ. ವಿದ್ಯುತ್ ಬಸ್‌ಗಳ ಬಳಕೆ ಹಾಗೂ ಸೋವಿಯತ್ ಕಾಲದ ಇತಿಹಾಸವನ್ನು ಪರಿಚಯಿಸುವ ಸಾಂಸ್ಕೃತಿಕ ತಾಣಗಳಂತಿರುವ ಮಾಸ್ಕೋ ಮೆಟ್ರೊ ನಿಲ್ದಾಣಗಳು ಆಧುನಿಕತೆ ಮತ್ತು ಇತಿಹಾಸದ ಸಮ್ಮಿಲನಕ್ಕೆ ಸಾಕ್ಷಿಯಾಗಿವೆ. ಈ ಪರಿಕಲ್ಪನೆಯನ್ನು ಭಾರತೀಯ ನಗರಗಳಲ್ಲೂ ಅಳವಡಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಆಹಾರ ಭದ್ರತೆಯ ವಿಚಾರದಲ್ಲಿ ರಷ್ಯಾ ದೇಶೀಯ ಕೃಷಿ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಧಾನ್ಯಗಳು ಹಾಗೂ ಹಣ್ಣು-ಹಂಪಲುಗಳಿಗಾಗಿ ಹೊರಗಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು ಆಹಾರ ಸ್ವಾವಲಂಬನೆ ಸಾಧಿಸಿದೆ. ಇನ್ನು ಸ್ವಚ್ಛತೆ ಎಂಬುದು ಸರ್ಕಾರದ ಜವಾಬ್ದಾರಿ, ಕಾನೂನು ಅಥವಾ ಅಭಿಯಾನಕ್ಕೆ ಸೀಮಿತವಾಗದೆ ಪ್ರತಿಯೊಬ್ಬ ನಾಗರಿಕನ ದೈನಂದಿನ ಸಂಸ್ಕೃತಿ ಮತ್ತು ಬಾಧ್ಯತೆಯಾಗಬೇಕು ಎಂದು ಪ್ರತಿಪಾದಿಸಿದರು.

ಕರ್ನಾಟಕದ ಸಾಂಸ್ಕೃತಿಕ ಸಂಕೇತ 'ಗಂಡಭೇರುಂಡ' ಹಾಗೂ ರಷ್ಯಾದ ರಾಷ್ಟ್ರೀಯ ಲಾಂಛನದ ನಡುವಿರುವ ದೃಶ್ಯ ಸಾಮ್ಯತೆಯನ್ನು ಉಲ್ಲೇಖಿಸಿದ ಅವರು, ಅಂತರರಾಷ್ಟ್ರೀಯ ಪ್ರವಾಸಗಳ ಮೂಲಕ ವಿದೇಶಗಳ ಉತ್ತಮ ಪದ್ಧತಿಗಳು ಮತ್ತು ಚಿಂತನೆಗಳನ್ನು ಅರ್ಥಮಾಡಿಕೊಂಡು ನಮ್ಮ ಪರಿಸರ ಹಾಗೂ ಸಾಮಾಜಿಕ ಹಿನ್ನೆಲೆಗೆ ಸೂಕ್ತವಾದ ಪರಿಹಾರಗಳನ್ನು ರೂಪಿಸಿಕೊಳ್ಳುವುದು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ರೋಸ್ಟ್ರಮ್ ವೇದಿಕೆಯ ಸಂಚಾಲಕಿ ಡಾ. ದೀಪಾ ಕೊಠಾರಿ ಹಾಗೂ ಹಳೆಯಂಗಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಉಪಸ್ಥಿತರಿದ್ದರು. ಹಿತಾ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ