ಮಂಗಳೂರು: ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಕಾಯಿಲೆಗಳು ಹೆಚ್ಚುತ್ತಿರುವುದರಿಂದ ಚಿಕಿತ್ಸೆಗೆ ರಕ್ತದ ಅಗತ್ಯತೆ ಹಾಗೂ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ, ರಕ್ತದಾನ ಶಿಬಿರ ಹಾಗೂ ದಾನಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೋಗಿಗಳ ಜೀವ ಉಳಿಸಲು ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು, ರಕ್ತದಾನವು ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಿದೆ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೆನ್‍ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಮಾತನಾಡಿ, ರೋಗಿಯ ಜೀವ ಉಳಿಸಲು ವೈದ್ಯರು ಶ್ರಮಿಸುವಂತೆಯೇ ರಕ್ತದಾನಿಗಳು ಕೂಡ ಜೀವ ರಕ್ಷಕರಾಗಿದ್ದಾರೆ ಎಂದರು. ರಕ್ತ ಕೊಡುವ ಮುನ್ನ ನಡೆಸುವ ತಪಾಸಣೆಯಿಂದ ದಾನಿಗೆ ತಿಳಿಯದ ಆರೋಗ್ಯ ಸಮಸ್ಯೆಗಳು ಬೆಳಕಿಗೆ ಬಂದು ಸಕಾಲದಲ್ಲಿ ಚಿಕಿತ್ಸೆ ಪಡೆಯಲು ನೆರವಾಗುತ್ತದೆ ಎಂದು ಅವರು ವಿವರಿಸಿದರು. ವೆನ್‍ಲಾಕ್ ಪ್ರಾದೇಶಿಕ ರಕ್ತಪೂರಣ ಘಟಕದ ವೈದ್ಯಾಧಿಕಾರಿ ಡಾ. ಶರತ್ ಕುಮಾರ್ ಮಾತನಾಡಿ, ರಕ್ತದಾನದಿಂದ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿ ದೇಹದಲ್ಲಿ ಹೊಸ ರಕ್ತದ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಕಚೇರಿಯ ಸಿಬ್ಬಂದಿಗೆ ಮಾದರಿಯಾದರು.
ಇದೇ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಕೃತಿನ್ ಕುಮಾರ್ (101 ಸಲ), ಫಿರೋಜ್ (100 ಸಲ) ಸೇರಿದಂತೆ ವಿಶ್ವನಾಥ್ ಕಾಮತ್ (90 ಸಲ), ದೀಪಕ್ ನಾಯಕ್ (72 ಸಲ), ಗಣೇಶ್ ಪ್ರಸಾದ್ (64 ಸಲ) ಹಾಗೂ ಸತೀಶ್ (51 ಸಲ) ಅವರನ್ನು ಶಾಲು ಹೊದಿಸಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜ್ಯೋತಿ ಕೆ. ಉಳೆಪಾಡಿ ಸ್ವಾಗತಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಖತೀಜ ದಿಲ್ ಶಾದ್ ವಂದನಾರ್ಪಣೆ ಸಲ್ಲಿಸಿದರೆ, ಐಸಿಟಿಸಿ ಕೌನ್ಸಿಲರ್ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.