ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಕೋಕರ್ ಹೈಡ್ರೋಟ್ರೀಟರ್ ಯೂನಿಟ್‌ನಲ್ಲಿ (CHTU) ಸೆಪ್ಟೆಂಬರ್ 30 ರಂದು ಸಂಭವಿಸಿದ ದುರದೃಷ್ಟಕರ ಘಟನೆಯಲ್ಲಿ ಮೃತಪಟ್ಟ ಶ್ರೀ ಮನೀಶ್ ಕರ್ಕಡ ಅವರ ಕುಟುಂಬಕ್ಕೆ MRPL ಆಡಳಿತ ಮಂಡಳಿಯು ತೀವ್ರ ಸಂತಾಪ ಸೂಚಿಸಿದೆ. ಈ ಕಷ್ಟದ ಸಮಯದಲ್ಲಿ ಕಂಪನಿಯು ಮೃತರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುವುದಾಗಿ ತಿಳಿಸಿದೆ.
ಮೃತರ ಕುಟುಂಬಕ್ಕೆ ಒಟ್ಟು ಅಂದಾಜು 1.20 ಕೋಟಿ ರೂಪಾಯಿಗಳ ಆರ್ಥಿಕ ಮತ್ತು ವಿಮಾ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಇದರಲ್ಲಿ 90 ಲಕ್ಷ ರೂ. ನೇರ ಆರ್ಥಿಕ ನೆರವು, ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ (GTLI) ಅಡಿಯಲ್ಲಿ ಸುಮಾರು 10 ಲಕ್ಷ ರೂ., ಹಾಗೂ ವರ್ಮನ್ಸ್ ಕಂಪೆನ್ಸೇಷನ್ ಪಾಲಿಸಿ (WCP) ಅಡಿಯಲ್ಲಿ 20 ಲಕ್ಷ ರೂ.ಗಳು ಸೇರಿವೆ.
ಇದಲ್ಲದೆ, ದ್ವಿತೀಯಕ ಕಾರ್ಯಪಡೆಗೆ (secondary workforce) ಮೆಡಿಕಲೈಮ್ ವಿಮೆ ಒದಗಿಸುವ ಪ್ರಸ್ತಾವನೆಯು ಚರ್ಚೆಯಲ್ಲಿದ್ದು, ದಕ್ಷಿಣ ಕನ್ನಡದ ಮಾನ್ಯ ಸಂಸದರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸುಮಾರು ನಾಲ್ಕು ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುವುದು ಎಂದು ಕಂಪನಿ ತಿಳಿಸಿದೆ.