ಮಂಗಳೂರು: ಕ್ರೈಸ್ತ ಕಾನ್ವೆಂಟ್ ಶಾಲೆಗಳಲ್ಲಿ ದಸರಾ ರಜೆ ನೀಡುವ ವಿಚಾರವಾಗಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೀಡಿರುವ ಹೇಳಿಕೆಗೆ ಅಖಿಲ ಭಾರತ ಕ್ರೈಸ್ತ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಿರುಗೇಟು ನೀಡಿದ್ದಾರೆ. ರಜೆ ವಿಚಾರವನ್ನು ಧಾರ್ಮಿಕ ಸಂಘರ್ಷವನ್ನಾಗಿ ಮಾಡುವ ಮೊದಲು ಶಾಲೆಗಳ ಶೈಕ್ಷಣಿಕ ವೇಳಾಪಟ್ಟಿ, ಸರ್ಕಾರದ ನಿಯಮಗಳು ಮತ್ತು ಶಿಕ್ಷಣ ಮಂಡಳಿಯ ನಿಯಮಾವಳಿಗಳನ್ನು ತಿಳಿದುಕೊಳ್ಳುವುದು ಅಗತ್ಯ. ರಜೆ ನಿರ್ಧಾರಗಳು ಕೇವಲ ಧರ್ಮದ ಆಧಾರದ ಮೇಲೆ ನಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾನ್ವೆಂಟ್ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ವಿದ್ಯಾರ್ಥಿಗಳೇ ಕಲಿಯುತ್ತಿದ್ದು, ಗುಣಮಟ್ಟದ ಶಿಕ್ಷಣ ಹಾಗೂ ಶಿಸ್ತಿಗಾಗಿ ಪೋಷಕರು ಈ ಸಂಸ್ಥೆಗಳನ್ನು ಆಯ್ಕೆ ಮಾಡುತ್ತಾರೆ. ಈ ಶಾಲೆಗಳಿಂದ ಎಷ್ಟು ವಿದ್ಯಾರ್ಥಿಗಳು ಮತಾಂತರಗೊಂಡಿದ್ದಾರೆ ಅಥವಾ ಹಾಳಾಗಿದ್ದಾರೆ ಎಂಬುದಕ್ಕೆ ಮುತಾಲಿಕ್ ಸ್ಪಷ್ಟ ಹಾಗೂ ಪರಿಶೀಲಿಸಬಹುದಾದ ದಾಖಲೆಗಳನ್ನು ಒದಗಿಸಲಿ ಎಂದು ಅವರು ಸವಾಲು ಹಾಕಿದ್ದಾರೆ. ಯಾವುದಾದರೂ ಶಾಲೆ ನಿಯಮ ಉಲ್ಲಂಘಿಸಿದ್ದರೆ ಶಿಕ್ಷಣ ಇಲಾಖೆಗೆ ದಾಖಲೆಗಳೊಂದಿಗೆ ದೂರು ನೀಡಿ ಕ್ರಮ ಕೈಗೊಳ್ಳಬೇಕೆ ಹೊರತು, ಶಾಲೆಗಳ ಮುಂದೆ ಪ್ರತಿಭಟನೆಯ ಬೆದರಿಕೆ ಒಡ್ಡುವುದು ಸರಿಯಲ್ಲ ಎಂದಿದ್ದಾರೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಹೇಳಿಕೆಗಳನ್ನು ನಿಲ್ಲಿಸಿ ಉದ್ಯೋಗ, ಶಿಕ್ಷಣ, ಮಾದಕವಸ್ತು ನಿಯಂತ್ರಣ ಹಾಗೂ ಮಹಿಳಾ ಸುರಕ್ಷತೆಯಂತಹ ರಚನಾತ್ಮಕ ವಿಷಯಗಳ ಕಡೆಗೆ ಗಮನಹರಿಸಬೇಕು ಮತ್ತು ಶಾಂತಿ ಕೆಡಿಸುವವರ ವಿರುದ್ಧ ಗೃಹ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.