image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್‌ನಲ್ಲಿ ‘ಪೋಷ್’ ಕಾಯ್ದೆ ಕುರಿತು ಸಮಾಲೋಚನಾ ಕೂಟ

ಆಳ್ವಾಸ್‌ನಲ್ಲಿ ‘ಪೋಷ್’ ಕಾಯ್ದೆ ಕುರಿತು ಸಮಾಲೋಚನಾ ಕೂಟ

ಮೂಡುಬಿದಿರೆ: ಶಿಕ್ಷಣ ಸಂಸ್ಥೆಗಳಲ್ಲಿ ಸುರಕ್ಷಿತ, ಗೌರವಯುತ ಹಾಗೂ ಲಿಂಗಸಮಾನತೆಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಂತರಿಕ ದೂರು ಸಮಿತಿ ವತಿಯಿಂದ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆ’ (ಪೋಷ್) ಕುರಿತು ಸಮಾಲೋಚನಾ ಕೂಟವನ್ನು ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ಸಂಸ್ಥೆಯಲ್ಲಿ ಪ್ರತಿಯೊಬ್ಬರೂ ಪರಸ್ಪರ ಗೌರವ ಹಾಗೂ ಜವಾಬ್ದಾರಿಯಿಂದ ನಡೆದುಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು ಎಂದರು. ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿ ಹಾಗೂ ಅವರ ಅಗತ್ಯಗಳನ್ನು ಅರ್ಥಮಾಡಿಕೊಂಡು ಸೂಕ್ತ ಮಾರ್ಗದರ್ಶನ ನೀಡುವುದು ಮುಖ್ಯವಾಗಿದ್ದು, ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆಳ್ವಾಸ್ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ. ಸಪ್ನಾ, ಪೋಷ್ ಕಾಯ್ದೆಯ ಉದ್ದೇಶ, ವ್ಯಾಪ್ತಿ ಹಾಗೂ ಮಹಿಳೆಯರ ಸುರಕ್ಷತೆ ಕುರಿತು ವಿವರಣೆ ನೀಡಿದರು. ಮಹಿಳೆಯರೊಂದಿಗೆ ಅಸಭ್ಯವಾಗಿ ಮಾತನಾಡುವುದು, ಅನಗತ್ಯ ದೈಹಿಕ ಸ್ಪರ್ಶ, ಅಸಮರ್ಪಕ ಸನ್ನೆ ಹಾಗೂ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ಬಳಕೆಯ ಸಂದರ್ಭದಲ್ಲಿ ಗೌಪ್ಯತೆ, ಘನತೆ ಭಂಗಗೊಳಿಸುವ ಅನಪೇಕ್ಷಿತ ನಡವಳಿಕೆಗಳು ಕಿರುಕುಳದ ವ್ಯಾಪ್ತಿಗೆ ಬರುತ್ತವೆ ಎಂದು ವಿವರಿಸಿದರು. ಆಳ್ವಾಸ್ ಕಾನೂನು ಕಾಲೇಜಿನ ಪ್ರಾಚಾರ್ಯೆ ಡಾ. ರಶ್ಮಿ ಶೆಟ್ಟಿ ಮಾತನಾಡಿ, ಲೈಂಗಿಕ ಕಿರುಕುಳವು ಕೇವಲ ದೈಹಿಕ ಸ್ಪರ್ಶಕ್ಕೆ ಸೀಮಿತವಾಗಿರದೆ ಮೌಖಿಕ, ಸನ್ನೆ, ಸಂದೇಶಗಳ ಮೂಲಕವೂ ಸಂಭವಿಸಬಹುದು ಎಂದು ಸ್ಪಷ್ಟಪಡಿಸಿದರು. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಮೌನವಾಗಿರದೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ ಸೂಕ್ತ ವೇದಿಕೆಯ ಮೂಲಕ ದೂರು ದಾಖಲಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಳ್ವಾಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲಾ ಮಾತನಾಡಿ, ಸಮಾಜದಲ್ಲಿರುವ ಪೂರ್ವಾಗ್ರಹ ಪೀಡಿತ ಹಾಗೂ ರೂಢಿಗತ ಮನೋಭಾವಗಳು ಅಸಮಾನತೆಗೆ ಕಾರಣವಾಗಿದ್ದು, ಪರಸ್ಪರ ಗೌರವ, ಸಮಾನತೆ ಮತ್ತು ಸೂಕ್ಷ್ಮ ಸಂವೇದನೆಯ ಆಧಾರದ ಮೇಲೆ ಆರೋಗ್ಯಕರ ಕಾರ್ಯಪರಿಸರ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಬೆಳಕು ಆಪ್ತ ಸಮಾಲೋಚನಾ ಕೇಂದ್ರದ ಮುಖ್ಯ ಆಪ್ತ ಸಮಾಲೋಚಕಿ ರೆನಿಟಾ ಡಿಸೋಜ ಸಮಾಲೋಚನಾ ಕೂಟದ ನಿರ್ವಹಣೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಆಂತರಿಕ ಸಮಿತಿಯ ಸಂಯೋಜಕಿ ಡಾ. ಸುಲತಾ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿ ರಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ