ಧರ್ಮಸ್ಥಳ: ಭಜನೆಯ ಮೂಲಕ ವ್ಯಕ್ತಿಯಲ್ಲಿ ಸಾತ್ವಿಕತೆ ಬೆಳೆದು ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಭಜನಾ ಪರಿಷತ್ತಿನ ಪದಾಧಿಕಾರಿಗಳ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಭಜನಾ ಪರಂಪರೆಯು ಸಾಮರಸ್ಯ ಮತ್ತು ಸಂಘಟನಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು.
ಭಜನೋತ್ಸವಗಳ ಮೂಲಕ ವಿವಿಧ ಭಜನಾ ಮಂಡಳಿಗಳು ಒಂದೆಡೆ ಸೇರುವುದರಿಂದ ಪರಸ್ಪರ ಸಂಪರ್ಕ ಹೆಚ್ಚಿ ಸಂಘಟನೆ ಬಲಗೊಳ್ಳುತ್ತದೆ. ಭಜನೆಯು ಕೇವಲ ಭಕ್ತಿಯ ಅಭಿವ್ಯಕ್ತಿಗೆ ಸೀಮಿತವಾಗದೆ, ವಿವಿಧ ವರ್ಗಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರಗಳನ್ನು ತಲುಪಿಸುವ ಶಕ್ತಿಯಾಗಿದೆ. ಭಜನಾ ಪರಿಷತ್ತಿನ ಎಲ್ಲ ಪದಾಧಿಕಾರಿಗಳ ಪರಿಶ್ರಮ ಹಾಗೂ ಜನರಲ್ಲಿ ಧಾರ್ಮಿಕ ಆಸಕ್ತಿ ಮೂಡಿಸುತ್ತಿರುವ ಪ್ರಯತ್ನ ಅಭಿನಂದನೀಯ ಎಂದು ಡಾ. ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ, ಭಜನಾ ಮಂದಿರಗಳು ಧರ್ಮ ಹಾಗೂ ಪುರುಷಾರ್ಥಗಳ ಅರಿವು ಮೂಡಿಸುವ ಕೇಂದ್ರಗಳಾಗಿವೆ. ಮಾಧ್ಯಮಗಳ ಪ್ರಭಾವದಿಂದ ವಿಮುಖರಾಗುತ್ತಿರುವ ಯುವಜನತೆಗೆ ಭಜನೆಯ ಸರಳತೆ ಹಾಗೂ ಮಹತ್ವವನ್ನು ತಿಳಿಸಿ ಅವರನ್ನು ಉತ್ತಮ ಮಾರ್ಗದಲ್ಲಿ ನಡೆಸಬೇಕಿದೆ. ಭಜನಾ ಸಂಘಟನೆಗಳನ್ನು ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತಗೊಳಿಸದೆ, ಊರಿನ ದೇವಸ್ಥಾನಗಳ ಸ್ವಚ್ಛತೆಯಂತಹ ಸಮಾಜಮುಖಿ ಚಟುವಟಿಕೆಗಳಿಗೂ ಬಳಸಿಕೊಂಡು ಸಂಘಟನಾ ಬಲವನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಜನಾ ಕಮ್ಮಟದ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾದೇಶಿಕ ಭಜನಾ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಎ. ವೀರುಶೆಟ್ಟಿ, ಉಪಾಧ್ಯಕ್ಷರಾದ ರಾಜೇಂದ್ರ ಬಸ್ರೂರು, ರತ್ನವರ್ಮ ಜೈನ್, ಕೇಶವ ಪಿ. ಬೆಳಾಲ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಡುಪಿ ಸಮನ್ವಯಾಧಿಕಾರಿ ರವೀಂದ್ರ ಬಸ್ರೂರು ವಂದಿಸಿ, ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.