ಧರ್ಮಸ್ಥಳ: ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರದ ಅಗತ್ಯತೆ ಹೆಚ್ಚಿದ್ದು, ಜೀವನದ ಸಾರ್ಥಕತೆಗೆ ಕಾರಣವಾಗುವ ಸಂಸ್ಕಾರ ಹಾಗೂ ಧಾರ್ಮಿಕ ಮೌಲ್ಯಗಳನ್ನು ಭಜನೆಯ ಮೂಲಕ ರೂಪಿಸಿಕೊಳ್ಳಲು ಸಾಧ್ಯ ಎಂದು ಉಜಿರೆಯ ಅಶೋಕ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟದ ಮೂರನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಇಂದಿನ ಯುವ ಪೀಳಿಗೆಯು ಸಂಪಾದನೆ ಹಾಗೂ ವ್ಯವಹಾರಿಕ ಬದುಕಿನ ಒತ್ತಡದ ನಡುವೆ ಸಂಸ್ಕಾರವನ್ನು ಮರೆಯುತ್ತಿದೆ. ವ್ಯಸನಗಳ ಭೀತಿಗೆ ಸಂಸ್ಕಾರದ ಅಭಾವವೇ ಪ್ರಮುಖ ಕಾರಣವಾಗಿದ್ದು, ಮಕ್ಕಳ ಮೇಲಿನ ಅತಿಯಾದ ಮೋಹ-ವಾತ್ಸಲ್ಯಗಳೂ ಇದನ್ನು ಮರೆಮಾಚುವಂತೆ ಮಾಡುತ್ತಿವೆ. ಈ ಸಂಸ್ಕಾರದ ಪುನಶ್ಚೇತನಕ್ಕೆ ಭಗವಂತನ ನಾಮಸ್ಮರಣೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಭಾರತೀಯ ಅಸ್ಮಿತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಅಗತ್ಯವಾಗಿದ್ದು, ಸಂಸ್ಕಾರ ಒದಗಿಸುವ ಭಜನೆಗೆ ದಾಸ ಪರಂಪರೆಯ ಕೊಡುಗೆ ಅಪಾರವಾಗಿದೆ. ಆತ್ಮ ಆಧ್ಯಾತ್ಮದ ಹಾದಿಯಲ್ಲಿ ಸಾಗಲು ಭಜನೆ ಸನ್ಮಾರ್ಗವಾಗಿದ್ದು, ಖಾವಂದರು ಈ 28 ವರ್ಷಗಳ ಭಜನಾ ಕಮ್ಮಟದ ಮೂಲಕ ಸಮಾಜದಲ್ಲಿ ಧಾರ್ಮಿಕ ಬದಲಾವಣೆ ತಂದು ಯುವ ಪೀಳಿಗೆಯನ್ನು ಆಧ್ಯಾತ್ಮದತ್ತ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಇದೇ ವೇಳೆ ಕಾಸರಗೋಡಿನ ರಾಜ್ಯ ಮಟ್ಟದ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ ಅವರು ಶಿಬಿರಾರ್ಥಿಗಳಿಗೆ ‘ಹರಿದಾಸ ಸಾಹಿತ್ಯದ ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ’ ಸೇರಿದಂತೆ ವಿವಿಧ ಭಜನಾ ಕೀರ್ತನೆಗಳ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಭಜನಾ ಪರಿಷತ್ ಉಪಾಧ್ಯಕ್ಷೆ ಡಾ. ಹೇಮಾವತಿ ಅಮ್ಮನವರು, ಐಶ್ವರ್ಯ ನಿಶ್ಚಲ್ ಜೈನ್, ಭಜನಾ ಕಮ್ಮಟ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ವೀರು ಶೆಟ್ಟಿ, ಸಮಿತಿಯ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.