image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಕನಕದಾಸರ ಸಾಹಿತ್ಯ ಕೊಂಕಣಿಯಲ್ಲಿ’ ವಿಚಾರ ಸಂಕಿರಣ ಮತ್ತು ಗೀತ ಗಾಯನ

ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಕನಕದಾಸರ ಸಾಹಿತ್ಯ ಕೊಂಕಣಿಯಲ್ಲಿ’ ವಿಚಾರ ಸಂಕಿರಣ ಮತ್ತು ಗೀತ ಗಾಯನ

ಮಂಗಳೂರು: 16ನೇ ಶತಮಾನದ ಸಂತ ಕವಿ ಕನಕದಾಸರ ಆಧ್ಯಾತ್ಮಿಕ ಹಾಗೂ ಭಕ್ತಿ ಚಿಂತನೆಗಳ ಸಮಾಜಮುಖಿ ಆಶಯಗಳನ್ನು ಕೊಂಕಣಿ ಭಾಷಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ಅಕ್ಟೋಬರ್ 3 ಮತ್ತು 4ರಂದು ‘ಕನಕದಾಸರ ಸಾಹಿತ್ಯ ಕೊಂಕಣಿಯಲ್ಲಿ’ ಎಂಬ ಎರಡು ದಿನಗಳ ವಿಚಾರ ಸಂಕಿರಣ ಹಾಗೂ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಸ್ವ ಕೊಂಕಣಿ ಕೇಂದ್ರದ ಅದ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈ ತಿಳಿಸಿದರು. ಅವರು ನರದ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿ, 

ಕರ್ನಾಟಕ ಸರ್ಕಾರವು ಕನಕದಾಸರ ಸಮಗ್ರ ಸಾಹಿತ್ಯವನ್ನು 14 ಭಾಷೆಗಳಿಗೆ ಅನುವಾದಿಸುವ ಯೋಜನೆಯಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಿದ ಗ್ರಂಥಗಳಲ್ಲಿ ಕೊಂಕಣಿ ಭಾಷೆಯ ಮೂರು ಸಂಪುಟಗಳು ಸೇರಿವೆ. ಡಾ. ಗೀತಾ ಶೇಣೈ ಅವರ ಸಂಪಾದಕತ್ವದಲ್ಲಿ ಹೊರಬಂದಿರುವ ಈ ಮೂರು ಸಂಪುಟಗಳನ್ನು ಕೊಂಕಣಿ ಸಮಾಜದ ಮನೆ, ಮಂದಿರ ಹಾಗೂ ದೇವಸ್ಥಾನಗಳಲ್ಲಿ ಹಾಡುವಂತಾಗಬೇಕು ಎಂಬ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 3ರಂದು ಬೆಳಿಗ್ಗೆ 10 ಗಂಟೆಗೆ ಜರುಗಲಿರುವ ಉದ್ಘಾಟನಾ ಸಮಾರಂಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಪ್ರಸಿದ್ಧ ಅನುವಾದಕ ಡಾ. ಪ್ರಧಾನ್ ಗುರುದತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯವಂತ ನಾಯಕ್ ಅವರು ಕನಕದಾಸ ಕಾವ್ಯಗಳ ಮೂರು ಸಂಪುಟಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಂದು ಸಾಯಂಕಾಲ 5 ರಿಂದ 7:30ರವರೆಗೆ ಕನಕದಾಸರ ಕೀರ್ತನೆಗಳ ಕುಣಿತ ಭಜನೆ ಹಾಗೂ 'ಶ್ರೀನಿವಾಸ ಕಲ್ಯಾಣ' ಎಂಬ ಕೊಂಕಣಿ ಗೀತ ನಾಟಕ ಪ್ರದರ್ಶನಗೊಳ್ಳಲಿದೆ.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಕನಕದಾಸರ ಸಾಹಿತ್ಯವನ್ನು ಕೊಂಕಣಿಗೆ ಅನುವಾದಿಸಿದ ಒಂಬತ್ತು ಜನ ತಜ್ಞರಾದ ಡಾ. ಗೀತಾ ಶೇಣೈ, ಡಾ. ಬಿ. ದೇವದಾಸ್ ಪೈ, ಡಾ. ಸಂಧ್ಯಾ ನಾಯಕ್, ಡಾ. ಶೈಲಜಾ ಮಂಗಳೂರುಕರ್, ಶಕುಂತಲಾ ಆರ್. ಕಿಣಿ, ಜಯಶ್ರೀ ಶೇಣೈ, ಮಧುಸೂದನ ಮಲ್ಯ, ಡಾ. ಅರವಿಂದ ಶಾನ್‌ಭಾಗ್ ಹಾಗೂ ಸ್ಮಿತಾ ಶೇಣೈ ಅವರು ಸಂಶೋಧನಾತ್ಮಕ ಪ್ರಬಂಧ ಮಂಡಿಸಲಿದ್ದಾರೆ. ಅಲ್ಲದೆ, ರಾಜ್ಯದ ಪ್ರಸಿದ್ಧ ಕೊಂಕಣಿ ಸಂಗೀತಗಾರರಾದ ಪುತ್ತೂರು ನರಸಿಂಹ ನಾಯಕ್, ವಿದುಷಿ ಯೋಗಿಷಿಣಿ, ಚೈತ್ರಾ ಪೈ, ಮೂಲ್ಕಿ ರವೀಂದ್ರ ಪ್ರಭು, ಮುರುಳೀಧರ ಕಾಮತ್, ವರ್ಷಾ ಪ್ರಭು ಹಾಗೂ ಪುತ್ತೂರು ಪಾಂಡುರಂಗ ನಾಯಕ್ ಅವರು ಕನಕದಾಸರ ಕೊಂಕಣಿ ಅನುವಾದಿತ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಾರ್ವಜನಿಕರು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

Category
ಕರಾವಳಿ ತರಂಗಿಣಿ