image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ವತಿಯಿಂದ ಅಕ್ಟೋಬರ್ 02 ರಂದು ಅಶೋಕ್ ಸಿಂಘಾಲ್ ಜೀ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ

ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ವತಿಯಿಂದ ಅಕ್ಟೋಬರ್ 02 ರಂದು ಅಶೋಕ್ ಸಿಂಘಾಲ್ ಜೀ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ

ಮಂಗಳೂರು: ರಾಮಜನ್ಮಭೂಮಿ ಹೋರಾಟದ ಪ್ರಮುಖ ರೂವಾರಿಯೂ, ವಿಶ್ವ ಹಿಂದೂ ಪರಿಷತ್‌ನ ದೀರ್ಘಕಾಲದ ನಾಯಕರಾಗಿದ್ದ ಅಶೋಕ್ ಸಿಂಘಾಲ್ ಜೀಯವರ ಜನ್ಮ ಶತಮಾನೋತ್ಸವದ ಅಂಗವಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಮುಂದುವರಿದ ಭಾಗವಾಗಿ, ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ವತಿಯಿಂದ ಅಶೋಕ್ ಸಿಂಘಾಲ್ ಜೀ ಅವರ ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ಅಕ್ಟೋಬರ್ 02, 2026 ರ ಶುಕ್ರವಾರದಂದು ಅಪರಾಹ್ನ 3:30 ಕ್ಕೆ ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದ ಭೂವರಾಹ ಆಡಿಟೋರಿಯಂನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.

ಈ ಕಾರ್ಯಕ್ರಮಕ್ಕೆ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ದಿಗ್ಗಜರು ದಿವ್ಯ ಸಾನಿಧ್ಯ ಹಾಗೂ ನೇತೃತ್ವವನ್ನು ವಹಿಸಲಿದ್ದಾರೆ. ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರು, ಶ್ರೀ ವಜ್ರದೇಹಿ ಮಠ ಗುರುಪುರದ ಪರಮಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಶ್ರೀ ಗುರುದೇವದತ್ತ ಸಂಸ್ಥಾನಂ ಒಡಿಯೂರಿನ ಪರಮಪೂಜ್ಯ ಸಾಧ್ವಿ ಮಾತಾನಂದಮಯೀ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷರೂ ಹಾಗೂ ಮೂತ್ರರೋಗ ತಜ್ಞರೂ ಆದ ಡಾ. ಸದಾನಂದ ಪೂಜಾರಿ ಅವರು ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಾಮಾಜಿಕ ಮುಖಂಡರಾದ ಶ್ರೀ ವೆಂಕಣ್ಣ ಕೊಯ್ಯೂರು ಅವರು ಈ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ.

ಕಾರ್ಯಕ್ರಮದ ವಿಶೇಷ ಅಭ್ಯಾಗತರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಕ್ಷೇತ್ರೀಯ ಸಂಘಚಾಲಕರಾದ ಡಾ. ವಾಮನ ಶೆಣೈ ಹಾಗೂ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾರ್ಯಕಾರಿಣಿ ಸದಸ್ಯರು ಮತ್ತು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಬಿ. ಪುರಾಣಿಕ್ ಅವರು ಭಾಗವಹಿಸಲಿದ್ದಾರೆ. ಅಲ್ಲದೆ, ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷರಾದ ಶ್ರೀ ಟಿ.ಎ.ಪಿ. ಶೆಣೈ ಅವರು ಸಮಾರಂಭದ ಮುಖ್ಯ ವಕ್ತಾರರಾಗಿ ಆಗಮಿಸಿ ಅಶೋಕ್ ಸಿಂಘಾಲ್ ಜೀಯವರ ಜೀವನ ಮತ್ತು ಹೋರಾಟದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ  ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿಶ್ವ ಹಿಂದೂ ಪರಿಷತ್, ಮಂಗಳೂರು ವಿಭಾಗದ ಶಿವಾನಂದ ಮೆಂಡನ್ ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.

Category
ಕರಾವಳಿ ತರಂಗಿಣಿ