ಧರ್ಮಸ್ಥಳ, ಸೆಪ್ಟೆಂಬರ್ 29: ಆರೋಗ್ಯ ರಕ್ಷಣೆಗೆ ಭಜನೆಯು ಅತ್ಯಂತ ಮುಖ್ಯ ಹಾದಿಯಾಗಿದ್ದು, ಬದುಕಿನ ಸುಗಮ ದಾರಿಯೇ ಭಜನೆಯಾಗಿದೆ. ಆರೋಗ್ಯವಂತ ಶರೀರವೇ ಆತ್ಮದ ಅರಮನೆ ಎಂದು ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟದ ಎರಡನೇ ದಿನದ ಶಿಬಿರದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಭಜನೆಯಿಂದ ಸಾಮಾಜಿಕ ಪರಿವರ್ತನೆ, ಕೌಟುಂಬಿಕ ಸಾಮರಸ್ಯ ಹಾಗೂ ಒಳ್ಳೆಯ ನಡತೆಗಳು ಸೃಷ್ಟಿಯಾಗಿ ಸಮಾಜದಲ್ಲಿ ತಲೆದೋರಿರುವ ಸಾಮಾಜಿಕ ಸಮಸ್ಯೆಗಳು ದೂರವಾಗುತ್ತವೆ. ಕತ್ತಲನ್ನು ದೂರ ಮಾಡಿ ಬೆಳಕನ್ನು ಪಸರಿಸುವಲ್ಲಿ ಭಜನೆಯು ಪ್ರಮುಖ ಪಾತ್ರ ವಹಿಸಲಿದ್ದು, ಭವಿಷ್ಯದ ಹಾದಿಯನ್ನು ತಪ್ಪಿಸುವ ಚಟಗಳನ್ನು ತ್ಯಜಿಸಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಇದು ಶಿಬಿರಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ವರ್ಣಜಾಗೃತಿ, ಮದ್ಯವರ್ಜನ ಶಿಬಿರ ಹಾಗೂ ಭಜನಾ ಕಮ್ಮಟಗಳಂತಹ ಯೋಜನೆಗಳ ಮೂಲಕ ಸಾವಿರಾರು ಜನರ ಪಾಲಿಗೆ ನೆರಳಾಗಿ ಮಾರ್ಗದರ್ಶನ ನೀಡುತ್ತಿರುವ ಪೂಜ್ಯ ಹೆಗ್ಗಡೆ ದಂಪತಿಗಳ ಸೇವೆಯನ್ನು ಶ್ಲಾಘಿಸಿದರು.
ಇದಕ್ಕೂ ಮುನ್ನ ನಡೆದ ಶಿಬಿರದ ತರಬೇತಿ ಸತ್ರದಲ್ಲಿ ಮಣಿಪಾಲದ ಸಂಗೀತ ವಿದೂಷಿ ಉಷಾ ಹೆಬ್ಬಾರ್ ಅವರು ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ಭಜನಾ ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಭಜನಾ ಕಮ್ಮಟ ಪರಿಷತ್‌ನ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಉಪಾಧ್ಯಕ್ಷೆ ಡಾ. ಹೇಮಾವತಿ ಅಮ್ಮನವರು, ಸುಪ್ರಿಯಾ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಜೈನ್, ಭಜನಾ ಕಮ್ಮಟದ ಮುಖ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಪರಿಷತ್‌ನ ಎಲ್ಲಾ ಸದಸ್ಯರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.